ಶಿವಮೊಗ್ಗ : ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಕಾಂಗ್ರೆಸ್ಸಿನಲ್ಲಿ ಈಗಾಗಲೇ ಯುದ್ಧ ಆರಂಭವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಇಂದು ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸ್ವಾಮಿ ಸಿದ್ದರಾಮಯ್ಯನವರೇ ನಾನು ಭವಿಷ್ಯ ನುಡಿಯುತ್ತೇನೋ, ನನ್ನ ರಾಜಕೀಯ ಲೆಕ್ಕಾಚಾರವೇ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಒಂದಂತೂ ಸತ್ಯ. ರಾಜ್ಯ ಸರಕಾರದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದಕ್ಕೆ ಡಿ.ಕೆ.ಶಿವಕುಮಾರ್ ಅನುಪಸ್ಥಿತಿಯಲ್ಲಿ ನಡೆದ ಸಿದ್ದರಾಮಯ್ಯ ಪ್ರಾಯೋಜಿತ ಔತಣಕೂಟವೇ ಸಾಕ್ಷಿ ಎಂದರು.
ಸಿದ್ದರಾಮಯ್ಯನವರು ಸಿಎಂ ಸ್ಥಾನ ಬಿಟ್ಟುಕೊಡಲು ಸಿದ್ಧರಿಲ್ಲ; ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಸಲು ಅವರ ವಿರೋಧಿ ಬಣಗಳೂ ಸಿದ್ಧವಿಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ವಿಶ್ಲೇಷಿಸಿದರು.
ಬಜೆಟ್ ಬಳಿಕ ಸಿದ್ದರಾಮಯ್ಯನವರು ರಾಜೀನಾಮೆ ಕೊಡುವ ಮತ್ತು ಆ ಸಂಬಂಧ ಕೇಂದ್ರದಲ್ಲಿ ಚರ್ಚೆ ನಡೆದಿರುವ ಬಗ್ಗೆ ಮಾಹಿತಿ ಹೊರಬರುತ್ತಿದೆ. ಬಜೆಟ್ ನಂತರದಲ್ಲಿ ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕಾಗುವ ಕಾರಣಕ್ಕೆ ಒಂದು ರಾಜಕೀಯ ದಾಳವನ್ನು ಉರುಳಿಸಲು ನಿನ್ನೆ ಮುನ್ನುಡಿ ಬರೆದಿದ್ದಾರೆ ಎಂದು ವಿವರಿಸಿದರು.
ಸಚಿನ್ ಪಾಂಚಾಳ ಅವರ ಆತ್ಮಹತ್ಯೆ ಸಂಬಂಧ ಗುಲ್ಬರ್ಗದಲ್ಲಿ ಪ್ರಿಯಾಂಕ ಖರ್ಗೆ ಅವರ ಮನೆಗೆ ಮುತ್ತಿಗೆ ಹಾಕಲಾಗುತ್ತಿದೆ. ಪ್ರಿಯಾಂಕ್ ಆಪ್ತ ಮಿತ್ರ, ಕಾಂಗ್ರೆಸ್ ಮುಖಂಡ ರಾಜು ಕಪನೂರ್ ಬೆದರಿಕೆಯಿಂದ ಆತ್ಮಹತ್ಯೆ ನಡೆದಿದೆ. ಮೃತರ ಕುಟುಂಬದ ಕೋರಿಕೆಯಂತೆ ಸಂಪೂರ್ಣ ಪ್ರಕರಣದ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.