ಕಾಸರಗೋಡು: ವಾಹನ ತಪಾಸಣೆ ಸಂದರ್ಭದಲ್ಲಿ ನಿಲ್ಲಿಸದೆ ಪರಾರಿಯಾಗಿದ್ದ ಕಾರನ್ನು ಬೆನ್ನಟ್ಟಿ ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಭಾರೀ ಪ್ರಮಾಣದ ಚಿನ್ನಾಭರಣ , ಬೆಳ್ಳಿ ಹಾಗೂ ಇನ್ನಿತರ ವಸ್ತುಗಳು ಪತ್ತೆಯಾದ ಘಟನೆ ಕಾಸರಗೋಡಿನ ಆದೂರು ಚೆಕ್ ಪೋಸ್ಟ್ ಬಳಿ ನಡೆದಿದೆ.
ಕಾರನಲ್ಲಿದ್ದ ಇಬ್ಬರು ಪರಾರಿಯಾಗಿದ್ದಾರೆ. ಅಬಕಾರಿ ಅಧಿಕಾರಿಗಳು ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಸುಳ್ಯ ಕಡೆಯಿಂದ ಬಂದ ಬಿಳಿ ಸ್ವಿಫ್ಟ್ ಕಾರನ್ನು ನಿಲ್ಲಿಸಲು ಸೂಚನೆ ನೀಡಿದರೂ ಪರಾರಿಯಾಗಿದ್ದು, ಎಂಟು ಕಿ.ಮೀ ತನಕ ಅಬಕಾರಿ ಅಧಿಕಾರಿಗಳು ಕಾರನ್ನು ಬೆನ್ನಟ್ಟಿದರು. ಮುಳ್ಳೇರಿಯ- ಬದಿಯಡ್ಕ ರಸ್ತೆಯ ಬೆಳ್ಳಿಗೆ ಎಂಬಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದು , ಕಾರಿನಲ್ಲಿದ್ದ ಇಬ್ಬರು ಪರಾರಿಯಾದರು.
ಕಾರನ್ನು ತಪಾಸಣೆ ನಡೆಸಿದಾಗ 140 ಗ್ರಾಂ ಚಿನ್ನಾಭರಣ , 339. 2 ಗ್ರಾಂ ಬೆಳ್ಳಿ ಆಭರಣ , 1.17 ಲಕ್ಷ ರೂ .ನಗದು, ತುಂಡರಿಸಿದ ಬೀಗ, ಗ್ಯಾಸ್ ಕಟ್ಟರ್, ನಾಲ್ಕು ಮೊಬೈಲ್ ಮೊದಲಾದವು ಪತ್ತೆಯಾಗಿದೆ. ಕಾರಿನ ನಂಬರ್ ನಕಲಿ ಎಂದು ತನಿಖೆಯಿಂದ ತಿಳಿದು ಬಂದಿದೆ. ಕಳವುಗೈದು ಪರಾರಿಯಾಗುತ್ತಿದ್ದುದಾಗಿ ಶಂಕಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪರಾರಿಯಾದವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.