ಹೈದರಾಬಾದ್: ನಿನ್ನೆ (ಏ.07) ನಡೆದ ಐಪಿಎಲ್ನ 19ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡವು 152 ರನ್ ಕಲೆಹಾಕಿದರೆ, ಈ ಗುರಿಯನ್ನು ಗುಜರಾತ್ ಟೈಟಾನ್ಸ್ ತಂಡ 16.4 ಓವರ್ಗಳಲ್ಲಿ ಬೆನ್ನತ್ತಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಮೊಹಮ್ಮದ್ ಸಿರಾಜ್.
ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಮಾಡಿದ್ದ ಗುಜರಾತ್ ಟೈಟಾನ್ಸ್ ತಂಡಕ್ಕೆ ಮೊದಲ ಓವರ್ನಲ್ಲೇ ಮೊಹಮ್ಮದ್ ಸಿರಾಜ್ ಯಶಸ್ಸು ತಂದುಕೊಟ್ಟರು. ಅದು ಕೂಡ ಡೇಂಜರಸ್ ಟ್ರಾವಿಸ್ ಹೆಡ್ (8) ಅವರನ್ನು ಔಟ್ ಮಾಡುವ ಮೂಲಕ.
ಇದಾದ ಬಳಿಕ ಅಪಾಯಕಾರಿಯಗುವ ಸೂಚನೆ ನೀಡಿದ್ದ ಅಭಿಷೇಕ್ ಶರ್ಮಾ (18) ಅವರ ವಿಕೆಟ್ ಕಬಳಿಸಿದರು. ಆ ನಂತರ 19ನೇ ಓವರ್ನಲ್ಲಿ ಮರಳಿದ ಸಿರಾಜ್ ಅನಿಕೇತ್ ವರ್ಮಾ (18) ಹಾಗೂ ಸಿಮರ್ಜೀತ್ ಸಿಂಗ್ (0) ವಿಕೆಟ್ ಉರುಳಿಸಿದರು. ಈ ಮೂಲಕ 4 ಓವರ್ಗಳಲ್ಲಿ ಕೇವಲ 17 ರನ್ ನೀಡಿ 4 ವಿಕೆಟ್ ಪಡೆದರು. ಇದು ಐಪಿಎಲ್ನಲ್ಲಿ ಮೊಹಮ್ಮದ್ ಸಿರಾಜ್ ಅವರ ಸರ್ವಶ್ರೇಷ್ಠ ಬೌಲಿಂಗ್ ಪ್ರದರ್ಶನ ಎಂಬುದು ವಿಶೇಷ. ಇದಕ್ಕೂ ಮುನ್ನ 2023 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 4 ಓವರ್ಗಳಲ್ಲಿ 21 ರನ್ ನೀಡಿ 4 ವಿಕೆಟ್ ಕಬಳಿಸಿರುವುದು ಶ್ರೇಷ್ಠ ಸಾಧನೆಯಾಗಿತ್ತು. ಆದರೆ ಈ ಬಾರಿ ಅದ್ಭುತ ಲಯದಲ್ಲಿರುವ ಸಿರಾಜ್ ಅತೀ ಕಡಿಮೆ ರನ್ ನೀಡಿ ನಾಲ್ಕು ವಿಕೆಟ್ ಉರುಳಿಸಿ ಮಿಂಚಿದ್ದಾರೆ.
ಈ ಅದ್ಬುತ ಪ್ರದರ್ಶನದ ಫಲವಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಹ ಪಡೆದರು. ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಮೊಹಮ್ಮದ್ ಸಿರಾಜ್, ತವರು ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಿರುವುದು ಖುಷಿ ನೀಡಿದೆ. ಏಕೆಂದರೆ ಇಂದಿನ ಪಂದ್ಯ ವೀಕ್ಷಿಸಲು ನನ್ನ ಕುಟುಂಬಸ್ಥರು ಸ್ಟೇಡಿಯಂಗೆ ಆಗಮಿಸಿದ್ದರು. ಹೀಗಾಗಿ ಅವರ ಮುಂದೆ ಉತ್ತಮ ಪ್ರದರ್ಶನ ನೀಡಿರುವುದು ವಿಶೇಷ ಅನುಭವ ಎಂದರು. ಇದನ್ನೂ ಓದಿ: Watch video: ಟಾರ್ಗೆಟ್ ರೀಚ್ ಆಗದ ಕಾರ್ಮಿಕನನ್ನು ನಾಯಿಯಂತೆ ನಡೆಸಿಕೊಂಡ ನರರೂಪದ ರಾಕ್ಷಸ! ಇನ್ನು ನಾನು 7 ವರ್ಷಗಳ ಕಾಲ ಆರ್ಸಿಬಿ ಪರ ಆಡಿದ್ದೇನೆ. ಈ ವೇಳೆ ನನ್ನ ಬೌಲಿಂಗ್ ಉತ್ತಮಗೊಳಿಸಲು ಮತ್ತು ಮನಸ್ಥಿತಿ ಬದಲಿಸಲು ಶ್ರಮ ಹಾಕಿರುವೆ. ಅದು ಈಗ ನಿಜವಾಗಿಯೂ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದು ಖುಷಿ ವ್ಯಕ್ತಪಡಿಸಿದರು. ಬೇಸರ ಹೊರಹಾಕಿದ ಸಿರಾಜ್? ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಆಯ್ಕೆಯಾಗದಿರುವ ಬಗ್ಗೆ ಕೇಳಿದಾಗ, ನಿಜಕ್ಕೂ ನಾನು ಭಾರತ ತಂಡಕ್ಕೆ ಆಯ್ಕೆಯಾಗಿಲ್ಲ ಎಂಬುದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಿಜವಾಗಲೂ ತುಂಬಾ ನೋವಾಗಿತ್ತು. ಇದಾಗ್ಯೂ ನಾನು ನನ್ನ ಉತ್ಸಾಹವನ್ನು ಉಳಿಸಿಕೊಂಡು ನನ್ನ ಫಿಟ್‌ನೆಸ್ ಮತ್ತು ಆಟದತ್ತ ಗಮನ ಹರಿಸಿದೆ. ನನ್ನ ಬೌಲಿಂಗ್ನಲ್ಲಿ ಉಂಟಾಗುತ್ತಿದ್ದ ತಪ್ಪುಗಳನ್ನು ಸರಿಪಡಿಸುವತ್ತ ಚಿತ್ತ ನೆಟ್ಟಿದ್ದೇನೆ. ಅಲ್ಲದೆ ಅವುಗಳನ್ನು ಸರಿಪಡಿಸಲು ಕಾರ್ಯ ನಿರ್ವಹಿಸುತ್ತಿದ್ದೇನೆ. ಇದೀಗ ನನ್ನ ಬೌಲಿಂಗ್ ಅನ್ನು ಆನಂದಿಸುತ್ತಿದ್ದೇನೆ. ಒಬ್ಬ ವೃತ್ತಿಪರನಾಗಿ, ನೀವು ಭಾರತ ತಂಡದೊಂದಿಗೆ ಸ್ಥಿರವಾಗಿ ಇರುವಾಗ, ಸಡನ್ ಆಗಿ ನಿಮ್ಮನ್ನು ಕೈ ಬಿಟ್ಟಾಗ ನಮ್ಮ ಮೇಲೆಯೇ ಸಂದೇಹಗಳು ಮೂಡುತ್ತವೆ. ಆದರೆ ಟೀಮ್ ಇಂಡಿಯಾದಿಂದ ನನ್ನನ್ನು ಕೈ ಬಿಟ್ಟಾಗ, ನೋವಾಗಿದ್ದರೂ ನಾನು ನನ್ನನ್ನು ಹುರಿದುಂಬಿಸಿಕೊಂಡೆ. ಐಪಿಎಲ್‌ಗಾಗಿ ತಯಾರಿಗಳನ್ನು ಆರಂಭಿಸಿದ್ದೆ. ಇದೀಗ ಅದರ ಪ್ರತಿಫಲ ಸಿಗುತ್ತಿದೆ. ನೀವು ನಿಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಿದಾಗ, ಯಾವಾಗಲೂ ಉನ್ನತ ಸ್ಥಾನದಲ್ಲಿರುತ್ತೀರಿ. ಇದೀಗ ನಾನು ಸಹ ಉತ್ತಮ ಪ್ರದರ್ಶನದೊಂದಿಗೆ ನನ್ನ ಯಶಸ್ಸನ್ನು ಎಂಜಾಯ್ ಮಾಡುತ್ತಿದ್ದೇನೆ ಎಂದು ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.