ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿರುವ ಆರೋಪದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಸಹಾಯವಾಣಿ ಆರಂಭಿಸಿದ್ದು, ಪ್ರಕರಣದ ಬಗ್ಗೆ ಯಾವುದೇ ಮಾಹಿತಿ ಇದ್ದರೆ 0824-2005301ಕ್ಕೆ ಕರೆ ಮಾಡಿ ತಿಳಿಸುವಂತೆ ಮನವಿ ಮಾಡಿದ್ದಾರೆ.
ಧರ್ಮಸ್ಥಳ ರಹಸ್ಯ ಸಮಾಧಿ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸ್‌ಐಟಿ ತಂಡ ದೂರುದಾರ ಗುರುತಿಸಿದ 13 ಸ್ಥಳಗಳಲ್ಲಿ ಒಂದೊಂದೇ ಜಾಗಗಳನ್ನು ಅಗೆದು ಶೋಧ ನಡೆಸುತ್ತಿದೆ. ದೂರುದಾರ ಸೂಚಿಸಿದ 5 ಸ್ಪಾಟ್‌ಗಳಲ್ಲಿ ಈಗಾಗಲೇ ಕಳೇಬರ ಹುಡುಕಾಟ ಮುಕ್ತಾಯವಾಗಿದೆ. ಆದರೆ ಇಲ್ಲಿ ಯಾವುದೇ ಕಳೇಬರ ಪತ್ತೆಯಾಗಿಲ್ಲ. ಈ ನಡುವೆ ಎಸ್‌ಐಟಿ ತಂಡ ಮಂಗಳೂರಿನ ಎಸ್ಐಟಿ ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಿ 0824-2005301ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಿದೆ.
ಮಾಸ್ಕ್ ಧರಿಸಿರುವ ಅನಾಮಿಕ ವ್ಯಕ್ತಿ ತಾನು ಈಗಾಗಲೇ ನೂರಾರು ಶವಗಳನ್ನು ನೇತ್ರಾವತಿ ನದಿ ತೀರದಲ್ಲಿ ಹೂತು ಹಾಕಿದ್ದೇನೆ ಎಂದು ಹೇಳಿಕೊಂಡಿದ್ದ. ಅದರಂತೆ ನಿನ್ನೆ ಎಸ್‌ಐಟಿ ಆತ ತೋರಿಸಿದ್ದ ಜಾಗದಲ್ಲಿ ಉತ್ಖನನ ನಡೆಸಿತ್ತು. ಭಾರಿ ಮಳೆಯ ನಡುವೆಯೇ ತೀವ್ರ ಬಂದೋಬಸ್ತ್‌ನಲ್ಲಿ ಹುಡುಕಾಟ ನಡೆಸಲಾಗಿತ್ತು. ಆದರೆ ಆತ ತೋರಿಸಿದ ಮೊದಲ ಜಾಗದಲ್ಲಿ ಯಾವುದೇ ಅಸ್ಥಿಪಂಜರ ಸಿಕ್ಕಿರಲಿಲ್ಲ. ಬಳಿಕ ಆತನೇ ಗುರುತು ಮಾಡಿದ್ದ 2 ಹಾಗೂ 3ನೇ ಜಾಗದಲ್ಲೂ ಎಸ್‌ಐಟಿ ಟೀಂ ಜಾಲಾಡಿತ್ತು. ಆದರೆ ಅಲ್ಲೂ ಯಾವುದೇ ಅಸ್ಥಿಪಂಜರ, ಯಾವುದೇ ತಲೆ ಬುರುಡೆ ಸೇರಿದಂತೆ ಏನೊಂದು ಕುರುಹು ಪತ್ತೆಯಾಗಿರಲಿಲ್ಲ.
ಜುಲೈ 28 ರಂದು ಧರ್ಮಸ್ಥಳ ಫೀಲ್ಡ್‌ಗೆ ಇಳಿದಿದ್ದ ಎಸ್‌ಐಟಿ ದೂರುದಾರನನ್ನ ಕರೆದೊಯ್ದು 13 ಸ್ಥಳ ಗುರುತು ಮಾಡಿತ್ತು. ನಿನ್ನೆ ಆತನ ಸಮ್ಮುಖದಲ್ಲೇ ನೇತ್ರಾವತಿ ತಟದಲ್ಲಿ ಗುಂಡಿ ತೋಡಲಾಗಿತ್ತು. ಆದರೆ ಅಲ್ಲಿ ಯಾವು ಶವ, ಅಸ್ಥಿಪಂಜರ ಸಿಕ್ಕಿರಲಿಲ್ಲ. ಬುಧವಾರ ನಾಲ್ಕು ಕಡೆ ಮತ್ತೆ ಅಗೆದು ಶೋಧ ನಡೆಸಲಾಗಿತ್ತು. ಇದು ರಿಸರ್ವ್ ಫಾರೆಸ್ಟ್ ಆಗಿರುವುದರಿಂದ ಜೆಸಿಬಿ ಬಳಕೆಗೆ ಬ್ರೇಕ್ ಬಿದ್ದಿದ್ದು ಕಾರ್ಮಿಕರಿಂದಲೇ ಗುಂಡಿ ಅಗೆಸಲಾಗಿತ್ತು.