ಅಹಮದಾಬಾದ್ : ಗುಜರಾತ್ ಹೈಕೋರ್ಟ್ನ ವರ್ಚುವಲ್ ವಿಚಾರಣೆಗೆ ವ್ಯಕ್ತಿಯೊಬ್ಬರು ಟಾಯ್ಲೆಟ್ ಸೀಟಿನ ಮೇಲೆ ಕುಳಿತು ಭಾಗಿಯಾಗಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜೂನ್ 20ರಂದು ನ್ಯಾಯಮೂರ್ತಿ ನಿರ್ಜಾರ್ ಎಸ್ ದೇಸಾಯಿ ಅವರ ಪೀಠ ವ್ಯಕ್ತಿಯೊಬ್ಬರನ್ನು ವಿಚಾರಣೆ ನಡೆಸಿತ್ತು. ಈ ವೇಳೆ ಆತ ಟಾಯ್ಲೆಟ್ ಸೀಟಿನ ಮೇಲೆ ಕುಳಿತು ವಿಚಾರಣೆಯಲ್ಲಿ ಭಾಗಿಯಾದ್ದ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಆ ವಿಡಿಯೋದಲ್ಲಿ ಆ ವ್ಯಕ್ತಿ “ಸಮದ್ ಬ್ಯಾಟರಿ” ಎಂಬ ಹೆಸರಿನಲ್ಲಿ ವರ್ಚುವಲ್ ಕೋರ್ಟ್ ವಿಚಾರಣೆಗೆ ಲಾಗಿನ್ ಆಗಿದ್ದಾನೆ. ಆತ ಕುತ್ತಿಗೆಗೆ ಬ್ಲೂಟೂತ್ ಇಯರ್ಫೋನ್ ಧರಿಸಿರುವುದು ಕಂಡುಬಂದಿದೆ.
ಕೋರ್ಟ್ ವಿಚಾರಣೆ ಪ್ರಾರಂಭವಾಗುತ್ತಿದ್ದಂತೆ ಅವನು ಆರಂಭದಲ್ಲಿ ತನ್ನ ಫೋನ್ ಅನ್ನು ದೂರದಲ್ಲಿ ಇರಿಸಿದನು. ಆಗ ಆತ ಟಾಯ್ಲೆಟ್ನಲ್ಲಿ ಕುಳಿತಿರುವುದು ಕಂಡಿತು. ಆತ ಮತ್ತೊಂದು ರೂಂನಲ್ಲಿ ಕುಳಿತು ವಿಚಾರಣೆಗೆ ಹಾಜರಾಗುವ ಮೊದಲು ಸ್ವಲ್ಪ ಹೊತ್ತು ಮೊಬೈಲನ್ನು ಮೇಜಿನ ಮೇಲಿಟ್ಟು ಕಣ್ಮರೆಯಾಗುತ್ತಾನೆ.
ಇನ್ನು ವಿಚಾರಣೆಯ ಸಮಯದಲ್ಲಿ ನ್ಯಾಯಾಲಯದ ಕೊಠಡಿಯಲ್ಲಿ ವಕೀಲರು ತಮ್ಮ ವಾದಗಳನ್ನು ಮಂಡಿಸುತ್ತಿರುವುದನ್ನು ಸಹ ವಿಡಿಯೋದಲ್ಲಿ ನೋಡಬಹುದು. ನ್ಯಾಯಾಲಯವು ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದ ವಿಷಯದ ವಿಚಾರಣೆ ನಡೆಸುತ್ತಿತ್ತು. ಅನುಚಿತವಾಗಿ ವರ್ತಿಸಿದ ಆ ವ್ಯಕ್ತಿ ಕ್ರಿಮಿನಲ್ ಪ್ರಕರಣದಲ್ಲಿ ದೂರುದಾರರಾಗಿದ್ದರು.