ದಾವಣಗೆರೆ : ಜಿಲ್ಲೆಯ ಚನ್ನಗಿರಿ ತಾಲೂಕಿನ ತಾವರೆಕೆರೆಯಲ್ಲಿ ಮಹಿಳೆಯೊಬ್ಬರ ಮೇಲೆ ಆರು ಜನರ ಗುಂಪೊಂದು ಪೈಪ್ ಹಾಗೂ ದೊಣ್ಣೆಯಿಂದ ಮನಬಂದಂತೆ ಥಳಿಸಿದ ಘಟನೆ ನಡೆದಿದ್ದು, ಹಲ್ಲೆ ನಡೆಸಿದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಏಪ್ರಿಲ್ 9 ರಂದು ಈ ಘಟನೆ ನಡೆದಿದ್ದು, ಹಲ್ಲೆ ಮಾಡಿದ ವಿಡಿಯೋವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದರು. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನಲೆ ತ್ವರಿತ ಕ್ರಮ ಕೈಗೊಂಡ ಪೊಲೀಸರು ಆರು ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ.
ಮೊಹಮ್ಮದ್ ನಯಾಜ್ (32), ಮೊಹಮ್ಮದ್ ಗೌಸ್ ಪೀರ್ (45), ಚಾಂದ್ ಪೀರ್(35), ಇನಾಯಿತ್ ಉಲ್ಲಾ(51), ದಸ್ತಗೀರ್(24) ಹಾಗೂ ರಸೂಲ್ ಟಿಆರ್ (42) ಬಂಧಿತ ಆರೋಪಿಗಳು.
ಸಂತ್ರಸ್ತೆ ಶಬೀನಾ ಬಾನು(೩೮) ಅವರನ್ನು ಆಕೆಯ ಪತಿ ಜಮೀಲ್ ಅಹ್ಮದ್ ಶಮೀರ್ ನೀಡಿದ ದೂರಿನ ಮೇರೆಗೆ ತಾವರೆಕೆರೆಯ ಸ್ಥಳೀಯ ಮಸೀದಿಗೆ ಪಂಚಾಯಿತಿ ಮಾಡಲು ಕರೆಸಲಾಗಿತ್ತು. ಈ ವೇಳೆ ಮಸೀದಿಯ ಹೊರಗೆ ಮಹಿಳೆಯ ಮೇಲೆ ಹಲ್ಲೆ ನಡೆಸಲಾಗಿತ್ತು.
ಶಬೀನಾ ಅವರ ಪತಿ ಜಮೀಲ್ ಅಹ್ಮದ್ ಶಮೀರ್ ಮನೆಗೆ ಹಿಂದಿರುಗಿದಾಗ ನಸ್ರೀನ್ ಮತ್ತು ಪರಿಚಯಸ್ಥ ಫಯಾಜ್ ಅವರೊಂದಿಗೆ ಮನೆಯಲ್ಲಿರುವುದಾಗಿ ಆರೋಪಿಸಿದ್ದರು. ಈ ಮೂವರು ಏಪ್ರಿಲ್ 7 ರಂದು ಬುಕ್ಕಂಬುಡಿಯ ಬೆಟ್ಟಕ್ಕೆ ಸಣ್ಣ ಪ್ರವಾಸಕ್ಕೆ ಹೋಗಿ ಸಂಜೆ ಹಿಂದಿರುಗಿದ್ದರು ಎನ್ನಲಾಗಿದೆ. ಈ ವೇಳೆ ಮಗೆನೆ ಹಿಂದಿರುಗಿದ್ದ ಶಮೀರ್ ಅವರು ಈ ಮೂವರನ್ನೂ ಒಟ್ಟಿಗೆ ನೋಡಿ ಕೋಪಗೊಂಡಿದ್ದನು. ಆ ಬಳಿಕ ತನ್ನ ಅಸಮಾಧಾನವನ್ನು ಮಸೀದಿ ಸಮಿತಿಗೆ ತಿಳಿಸಿದ್ದರು. ಮಸೀದಿಯು ಏಪ್ರಿಲ್ 9 ರಂದು ಪಂಚಾಯಿತಿ ಮಾಡಲು ಮೂವರನ್ನೂ ಕರೆಸಿತ್ತು.
ಆದರೆ, ಮಸೀದಿಯ ಹೊರಗೆ ಆರು ಜನರ ಗುಂಪೊಂದು ಶಬೀನಾ ಮೇಲೆ ಕೋಲು, ಪೈಪು ಮತ್ತು ದೊಣ್ಣೆಗಳಿಂದ ಹಲ್ಲೆ ಮಾಡಿತ್ತು. ಜೊತೆಗೆ ಕೊಲೆ ಮಾಡುವ ಉದ್ದೇಶದಿಂದ ಕಲ್ಲುಗಳಿಂದ ಹೊಡೆಯಲು ಪ್ರಯತ್ನಿಸಿತು ಎನ್ನಲಾಗಿದೆ. ಸಂಪೂರ್ಣ ಘಟನೆಯು ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.
ಘಟನೆ ಹಿನ್ನೆಲೆ ಶಬೀನಾ ಅವರು ಏಪ್ರಿಲ್ 11 ರಂದು ಬಿಎನ್‌ಎಸ್ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ.