ಶ್ರೀನಗರ: ಉಗ್ರರ ವಿರುದ್ಧ ಗಡಿಯಲ್ಲಿ ನಡೆಯುತ್ತಿರುವ ಅತಿದೊಡ್ಡ ಕಾರ್ಯಾಚರಣೆ ಆಪರೇಷನ್ ಅಖಾಲ್ ಮೂರನೇ ದಿನಕ್ಕೆ ಪ್ರವೇಶಿಸಿದ್ದು, ಮೂವರು ಉಗ್ರರನ್ನು ಭದ್ರತಾ ಪಡೆ ಸದೆ ಬಡಿದಿದೆ. ಕಾರ್ಯಾಚರಣೆಯಲ್ಲಿ ಓರ್ವ ಯೋಧ ತೀವ್ರವಾಗಿ ಗಾಯಗೊಂಡಿದ್ದಾರೆ.
ನಿನ್ನೆ ಮೂವರು ಉಗ್ರರನ್ನು ಸೇನೆ ಸಾಯಿಸಿತ್ತು. ಇದರೊಂದಿಗೆ ಆಪರೇಷನ್ ಅಖಾಲ್ನಲ್ಲಿ ಆರು ಉಗ್ರರನ್ನು ಮುಗಿಸಿದಂತಾಗಿದೆ. ಕಾಶ್ಮೀರದ ದಕ್ಷಿಣಕ್ಕಿರುವ ಕುಲ್ಗಾಂವ್ ಜಿಲ್ಲೆಯ ಅಖಾಲ್ ಕಾಡಿನಲ್ಲಿ ಕಳೆದ ಮೂರು ದಿನಗಳಿಂದ ಉಗ್ರರನ್ನು ಮುಗಿಸುವ ಕಾರ್ಯಾಚರಣೆ ನಡೆಯುತ್ತಿದ್ದು, ಹಗಲಿರುಳು ಸ್ಫೋಟ ಮತ್ತು ಗುಂಡಿನ ಮೊರೆತದ ಸದ್ದು ಕೇಳಿಸುತ್ತಿದೆ.
ಜಮ್ಮು – ಕಾಶ್ಮೀರ ಪೊಲೀಸರು, ಸಿಆರ್ಪಿಎಫ್ ಪಡೆ ಮತ್ತು ಸೇನೆಯ ಜಂಟಿ ಕಾರ್ಯಾಚರಣೆ ನಡೆಯುತ್ತಿದ್ದು, ಕಾಡಿನಲ್ಲಿ ಇನ್ನಷ್ಟು ಉಗ್ರರು ಅಡಗಿದ್ದಾರೆ ಎನ್ನಲಾಗಿದೆ. ಕಾಡಿನಲ್ಲಿ ಉಗ್ರರ ಚಲನವಲನ ಕಂಡುಬಂದ ಕುರಿತು ಬೇಹು ಮಾಹಿತಿ ಸಿಕ್ಕಿದ ಬಳಿಕ ಅಖಾಲ್ನಲ್ಲಿ ಶುಕ್ರವಾರ ಕಾರ್ಯಾಚರಣೆ ಪ್ರಾರಂಭಿಸಲಾಗಿತ್ತು. ಶುಕ್ರವಾರ ಹಗಲಿಡೀ ಗುಂಡಿನ ಕಾಳಗ ನಡೆದಿತ್ತು. ರಾತ್ರಿ ಕಾರ್ಯಾಚರಣೆ ಸ್ಥಗಿತಗೊಳಿಸಿ ಶನಿವಾರ ನಸುಕಿಗೆ ಮತ್ತೆ ಪ್ರಾರಂಭಿಸಲಾಗಿತ್ತು. ಶನಿವಾರ ಮೂವರು ಉಗ್ರರನ್ನು ಸಾಯಿಸುವಲ್ಲಿ ಭದ್ರತಾ ಪಡೆ ಯಶಸ್ವಿಯಾಗಿತ್ತು. ಶನಿವಾರ ರಾತ್ರಿ ಬಿಡುವಿಲ್ಲದೆ ಕಾರ್ಯಾಚರಣೆ ನಡೆಸಿ ಮತ್ತೆ ಮೂವರು ಉಗ್ರರನ್ನು ಸಾಯಿಸಲಾಗಿದೆ.
ಹತ್ಯೆಯಾದ ಉಗ್ರರೆಲ್ಲ ಪಾಕಿಸ್ತಾನದ ಉಗ್ರ ಸಂಘಟನೆ ಲಷ್ಕರ್ ಎ ತಯ್ಯಬದ ಅಂಗಸಂಸ್ಥೆಯಾದ ದ ರೆಸಿಸ್ಟೆನ್ಸ್ ಫ್ರಂಟ್ಗೆ ಸೇರಿದವರು ಎಂದು ಭದ್ರತಾ ಪಡೆ ಮೂಲಗಳು ತಿಳಿಸಿವೆ. ಇದೇ ಉಗ್ರ ಸಂಘಟನೆ ಪಹಲ್ಗಾಮ್ನಲ್ಲಿ 26 ಅಮಾಯಕ ಹಿಂದುಗಳನ್ನು ಹತ್ಯೆ ಮಾಡಿತ್ತು. ಈ ಮೂವರು ಉಗ್ರರನ್ನು ಬೇಟೆಯಾಡಿದ ಬಳಿಕ ಕಾಶ್ಮೀರದ ಕಾಡಿನಲ್ಲಿ ಉಗ್ರರನ್ನು ನಾಮಾವಶೇಷ ಮಾಡಲು ನಿರಂತರ ಕಾರ್ಯಾಚರಣೆ ನಡೆಯುತ್ತಿದೆ.