ಮುಂಬೈ :ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನಗೆ 2024 ರ ವರ್ಷದ ಮಹಿಳಾ ಏಕದಿನ ಕ್ರಿಕೆಟರ್ ಪ್ರಶಸ್ತಿಗೆ ಐಸಿಸಿ ಆಯ್ಕೆ ಮಾಡಿದೆ.
ಕಳೆದ ವರ್ಷ ಏಕದಿನ ಕ್ರಿಕೆಟ್ನಲ್ಲಿ 13 ಇನ್ನಿಂಗ್ಸ್ಗಳನ್ನು ಆಡಿದ್ದ ಮಂಧಾನ ನಾಲ್ಕು ಭರ್ಜರಿ ಶತಕಗಳ ಸಹಿತ ಬರೋಬ್ಬರಿ 747 ರನ್ ಕಲೆಹಾಕಿದ್ದರು. ಈ ಮೂಲಕ ಕಳೆದ ವರ್ಷ ಏಕದಿನ ಮಾದರಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಮಹಿಳಾ ಕ್ರಿಕೆಟರ್ಗಳ ಪಟ್ಟಿಯಲ್ಲಿ ಮಂಧಾನ ಅಗ್ರಸ್ಥಾನವನ್ನು ಪಡೆದುಕೊಂಡಿದ್ದರು.
ಮಂಧಾನ ಬಳಿಕ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ದಕ್ಷಿಣ ಆಫ್ರಿಕಾ ತಂಡದ ಲಾರಾ ವೋಲ್ವಾರ್ಡ್ಟ್ 697 ರನ್ ಹಾಗೂ ಟ್ಯಾಮಿ ಬ್ಯೂಮಾಂಟ್ 554 ರನ್ ಮತ್ತು ಹೇಲಿ ಮ್ಯಾಥ್ಯೂಸ್ 469 ರನ್ ಕಲೆಹಾಕಿದ್ದಾರೆ.
2024 ರ ವರ್ಷದ ಮಹಿಳಾ ಏಕದಿನ ಕ್ರಿಕೆಟರ್ ಪ್ರಶಸ್ತಿಗೆ ಭಾಜನರಾಗುವ ಮೂಲಕ ಮಂಧಾನ ತಮ್ಮ ವೃತ್ತಿ ಬದುಕಿನಲ್ಲಿ ನಾಲ್ಕನೇ ಐಸಿಸಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. 2018 ರಲ್ಲಿ ಮೊಟ್ಟ ಮೊದಲ ಬಾರಿಗೆಮಹಿಳಾ ಏಕದಿನ ಕ್ರಿಕೆಟರ್ ಪ್ರಶಸ್ತಿ ಗೆದ್ದಿದ್ದ ಮಂಧಾನ, ಅದೇ ವರ್ಷ 2018 ರ ವರ್ಷದ ಮಹಿಳಾ ಕ್ರಿಕೆಟರ್ ಗೌರವಕ್ಕೂ ಭಾಜನರಾಗಿದ್ದರು. 2021ರ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿಯನ್ನು ಎರಡನೇ ಬಾರಿಗೆ ಗೆದ್ದುಕೊಳ್ಳುವಲ್ಲಿ ಯಶಸ್ಸಿಯಾದರು.
ಇದೀಗ 2024 ರಲ್ಲಿ ಮಂಧಾನ ಎರಡನೇ ಬಾರಿಗೆ ವರ್ಷದ ಮಹಿಳಾ ಏಕದಿನ ಕ್ರಿಕೆಟರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಈ ಮೂಲಕ ನಾಲ್ಕು ಐಸಿಸಿ ಪ್ರಶಸ್ತಿಗಳನ್ನು ಗೆದ್ದ ಮೊದಲ ಭಾರತೀಯ ಮಹಿಳಾ ಕ್ರಿಕೆಟರ್ ಎಂಬ ದಾಖಲೆ ಬರೆದಿದ್ದಾರೆ.