ಬೆಂಗಳೂರು: ಆಸ್ಟ್ರೇಲಿಯಾ ಮತ್ತು ಗೋವಾ ಮಾದರಿಯಲ್ಲಿ ಕರ್ನಾಟಕದಲ್ಲೂ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಶುಕ್ರವಾರ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಮಾಧ್ಯಮಗಳ ದುರುಪಯೋಗದ ಕುರಿತು ಬಿಜೆಪಿ ಹಿರಿಯ ನಾಯಕ ಮತ್ತು ಶಾಸಕ ಎಸ್ ಸುರೇಶ್ ಕುಮಾರ್ ಕಳವಳ ವ್ಯಕ್ತಪಡಿಸಿದಾಗ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಇದು ಗಂಭೀರ ವಿಷಯವಾಗಿದೆ ಎಂದು ಸಹಮತ ವ್ಯಕ್ತಪಡಿಸಿದರು. ಅಲ್ಲದೆ, ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧಿಸುವ ಬಗ್ಗೆ ಯೋಚಿಸಲಾಗುವುದು ಎಂದರು.
ಈ ನಿಟ್ಟಿನಲ್ಲಿ ಫಿನ್ಲ್ಯಾಂಡ್ ಈಗಾಗಲೇ ಕ್ರಮ ಕೈಗೊಂಡಿದೆ, ಬ್ರಿಟನ್ ಚಿಂತನೆ ನಡೆಸುತ್ತಿದೆ. ಆಸ್ಟ್ರೇಲಿಯಾ ಎರಡು ತಿಂಗಳ ಹಿಂದೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಿತು. ಕೃತಕ ಬುದ್ಧಿಮತ್ತೆ ಮತ್ತು ಸಾಮಾಜಿಕ ಮಾಧ್ಯಮದ ಜವಾಬ್ದಾರಿಯುತ ಬಳಕೆಗಾಗಿ ‘ಡಿಜಿಟಲ್ ಡಿಟಾಕ್ಸಿಫಿಕೇಷನ್’ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ. ಐಟಿ-ಬಿಟಿ ಇಲಾಖೆ ಮೆಟಾ ಸಹಯೋಗದೊಂದಿಗೆ ಮೂರು ಲಕ್ಷಕ್ಕೂ ಹೆಚ್ಚು ಮಕ್ಕಳು ಮತ್ತು ಒಂದು ಲಕ್ಷ ಶಿಕ್ಷಕರನ್ನು ಒಳಗೊಂಡಂತೆ ಈ ಕಾರ್ಯ ನಡೆಸುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಡಿಜಿಟಲ್ ವ್ಯಸನದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಸಹಾಯ ಮಾಡಲು 2025ರ ಮಾರ್ಚ್ನಲ್ಲಿ ‘ಬಿಯಾಂಡ್ ಸ್ಕ್ರೀನ್ಸ್’ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಡಿಜಿಟಲ್ ಡಿಟಾಕ್ಸ್ ಸೆಂಟರ್ ಮತ್ತು ಇಲಾಖೆಯ ಅಧಿಕೃತ ವೆಬ್ಸೈಟ್ ಉದ್ಘಾಟಿಸಿದ ನಂತರ GAFX 2025 ಶೃಂಗಸಭೆಯಲ್ಲಿ ಈ ಉಪಕ್ರಮವನ್ನು ಘೋಷಿಸಲಾಗಿತ್ತು. ಡಿಟಾಕ್ಸ್ ಸೆಂಟರ್ ಎಂಬುದು ಆರೋಗ್ಯಕರ ಡಿಜಿಟಲ್ ಬಳಕೆಗಾಗಿ ಸಂಪನ್ಮೂಲಗಳು, ಸಮಾಲೋಚನೆ ಇತ್ಯಾದಿಗಳಿಗೆ ಮೀಸಲಾದ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.
ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಗೆ ವಯಸ್ಸಿನ ಆಧಾರಿತ ನಿರ್ಬಂಧವನ್ನು ವಿಧಿಸುವಂತೆ ಗುರುವಾರ ಲೋಕಸಭೆಗೆ ಸಲ್ಲಿಸಲಾದ 2025-26ರ ಆರ್ಥಿಕ ಸಮೀಕ್ಷೆಯಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂಬುದನ್ನು ಸದನದಲ್ಲಿ ಸುರೇಶ್ ಕುಮಾರ್ ತಿಳಿಸಿದರು.

































