ಲಕ್ನೋ : ವರದಕ್ಷಿಣೆ ಕಿರುಕುಳ ನೀಡಿ ಮಹಿಳೆಯನ್ನು ಆಕೆಯ ಪತಿ ಮತ್ತು ಅತ್ತೆ-ಮಾವ ಹತ್ಯೆ ಮಾಡಿರುವ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಇದೀಗ ಆಕೆಯ ಮಗ ಅಮ್ಮನನ್ನು ಲೈಟರ್ನಿಂದ ಸುಟ್ಟು ಕೊಲೆ ಮಾಡಲಾಗಿದೆ ಎಂದು ತಂದೆ, ಅಜ್ಜ ಹಾಗೂ ಅಜ್ಜಿಯ ಕ್ರೌರ್ಯವನ್ನು ಬಿಚ್ಚಿಟ್ಟಿದ್ದಾನೆ.
ಗ್ರೇಟರ್ ನೋಯ್ಡಾದಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ವಿಚಾರಣೆ ಸಮಯದಲ್ಲಿ 6 ವರ್ಷದ ಬಾಲಕ “ಅಪ್ಪ, ಅಜ್ಜ ಮತ್ತು ಅಜ್ಜಿ ಸೇರಿ ಅಮ್ಮನ ಕೆನ್ನೆಗೆ ಹೊಡೆದ್ರೂ, ಆಮೇಲೆ ಅಮ್ಮನ ಮೇಲೆ ಏನೋ ಸುರಿದು ಲೈಟರ್ನಿಂದ ಬೆಂಕಿ ಹಚ್ಚಿದ್ರೂ” ಎಂದು ತಿಳಿಸಿದ್ದಾನೆ.
ನಿಕ್ಕಿ (26) ಕೊಲೆಯಾದ ಮಹಿಳೆ. ಪತಿ ಮತ್ತು ಅತ್ತೆ-ಮಾವ ಸೇರಿಕೊಂಡು ಆಕೆಗೆ ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾರೆ. ಮಹಿಳೆಗೆ 36 ಲಕ್ಷ ರೂ. ವರದಕ್ಷಿಣೆಗಾಗಿ ಬೇಡಿಕೆ ಇಟ್ಟು, ಚಿತ್ರಹಿಂಸೆ ನೀಡುತ್ತಿದ್ದರು ಎಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದರು.
ಈ ಭಯಾನಕ ಘಟನೆಯ ಎರಡು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಒಂದು ವಿಡಿಯೋದಲ್ಲಿ ವ್ಯಕ್ತಿ ಮತ್ತು ಮಹಿಳೆಯೊಬ್ಬರು ಬಾಲಕನ ತಾಯಿ(ನಿಕ್ಕಿ) ಮೇಲೆ ಹಲ್ಲೆ ನಡೆಸಿ ಕೂದಲು ಹಿಡಿದು ಮನೆಯ ಹೊರಗೆ ಎಳೆದುಕೊಂಡು ಹೋಗುವುದನ್ನು ಕಾಣಬಹುದು. ಇನ್ನೊಂದು ವೀಡಿಯೊದಲ್ಲಿ ಮಹಿಳೆ ಬೆಂಕಿ ಹಚ್ಚಿದ ನಂತರ ಮೆಟ್ಟಿಲುಳಿಂದ ಕುಂಟುತ್ತಾ ಇಳಿಯುವುದನ್ನು ಕಾಣಬಹುದಾಗಿದೆ.
ಮಹಿಳೆಯನ್ನು ನೆರೆಹೊರೆಯವರ ಸಹಾಯದಿಂದ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದಾದರೂ ಮಾರ್ಗ ಮಧ್ಯೆಯೇ ಮಹಿಳೆ ಸಾವನ್ನಪ್ಪಿದ್ದಳು.