ಬೆಂಗಳೂರು : ಕಾರ್ಯಕ್ರಮವೊಂದರಲ್ಲಿ ಕನ್ನಡ ಹಾಡು ಹೇಳಿ ಎಂದಿದ್ದಕ್ಕೆ, ಇದಕ್ಕೇನೇ ಪಹಲ್ಗಾಮ್ ದಾಳಿ ನಡೆದಿದ್ದು ಎಂದು ಗಾಯಕ ಸೋನು ನಿಗಮ್ ಹೇಳಿದ್ದು, ಅನಾವಶ್ಯಕವಾಗಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಬೆಂಗಳೂರಿನ ಖಾಸಗಿ ಕಾಲೇಜೊಂದರ ಕಾರ್ಯಕ್ರಮವೊಂದರಲ್ಲಿ ಸೋನು ನಿಗಮ್ ಭಾಗವಹಿಸಿದ್ದರು. ಈ ವೇಳೆ ವಿದ್ಯಾರ್ಥಿಯೊಬ್ಬ ಕನ್ನಡ ಹಾಡು ಹೇಳುವಂತೆ ಕೇಳಿಕೊಂಡಿದ್ದಾನೆ. ಅದಕ್ಕೆ ಸೋನು ನಿಗಮ್ ತಮ್ಮ ಹಾಡನ್ನು ಅರ್ಧಕ್ಕೆ ನಿಲ್ಲಿಸಿ, ನನ್ನ ವೃತ್ತಿಜೀವನದಲ್ಲಿ ನಾನು ಬೇರೆ ಬೇರೆ ಭಾಷೆಗಳಲ್ಲಿ ಹಾಡಿದ್ದೇನೆ. ನಾನು ಹಾಡಿದ ಅತ್ಯುತ್ತಮ ಹಾಡುಗಳು ಕನ್ನಡದಲ್ಲಿವೆ. ನಾನು ಕರ್ನಾಟಕಕ್ಕೆ ಬಂದಾಗಲೆಲ್ಲಾ ತುಂಬಾ ಪ್ರೀತಿ, ಗೌರವದಿಂದ ಬರುತ್ತೇನೆ. ಪ್ರತಿ ಬಾರಿ ಯಾರಾದರೂ ಕನ್ನಡ ಎಂದು ಕೂಗಿದಾಗ ಅವರಿಗಾಗಿ ಕನ್ನಡ ಹಾಡನ್ನು ಹಾಡಿರುತ್ತೇನೆ ಎಂದಿದ್ದಾರೆ.
ಆದರೆ ಆ ಬಳಿಕ ಕನ್ನಡ, ಕನ್ನಡ ಎಂದು ಕಿರುಚಿಕೊಂಡು ಆ ಹುಡುಗ ಹೇಳಿದ್ದು ನನಗೆ ಇಷ್ಟವಾಗಲಿಲ್ಲ. ಇದೇ ಕಾರಣದಿಂದ ಪಹಲ್ಗಾಮ್ ದಾಳಿಯಾಗಿದ್ದು ಎಂದು ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದಾರೆ. ಸದ್ಯ ಗಾಯಕನ ಹೇಳಿಕೆಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದು, ಈ ರೀತಿ ಹೇಳಿಕೆ ನೀಡಿದ್ದು ಸರಿ ಅಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಇನ್ನು ಸೋನು ನಿಗಮ್ ಮಾತಿಗೆ ಕನ್ನಡಪರ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗಿದ್ದು, ಕನ್ನಡ ಹಾಡುವಂತೆ ಹೇಳಿದ್ದಕ್ಕೂ, ಭಯೋತ್ಪಾದಕರ ದಾಳಿಗೂ ಏನು ಸಂಬಂಧ? ಎಂದು ಆಕ್ರೋಶ ಹೊರಹಾಕಿದ್ದಾರೆ. ಸೋನು ನಿಗಮ್‌ರನ್ನು ಕನ್ನಡ ಚಿತ್ರೋದ್ಯಮದಿಂದ ದೂರ ಇಡಬೇಕು. ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.