ಸಿಯೊಲ್ : ದಕ್ಷಿಣ ಕೊರಿಯಾದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿದ್ದು, ರಕ್ಷಣಾ ಸಚಿವ ಕಿಮ್ ಯೋಂಗ್-ಹ್ಯುನ್ ರಾಜೀನಾಮೆ ನೀಡಿದ್ದಾರೆ.
ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರು ಡಿ.4ರ ರಾತ್ರಿ 11 ಗಂಟೆಗೆ ದಿಢೀರ್ ಎಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿ, ಸಮರ ಕಾನೂನನ್ನು ಹೇರುವುದಾಗಿ ಘೋಷಣೆ ಮಾಡಿದರು. ಆದರೆ ಪ್ರತಿಪಕ್ಷಗಳ ವಿರೋಧ ಮತ್ತು ಸಾರ್ವಜನಿಕರ ಗಲಭೆಯ ನಡುವೆ ಅವರು ಈ ತೀರ್ಮಾನವನ್ನು ಹಿಂಪಡೆದರು.
ಇದೀಗ ಸೌದಿ ಅರೇಬಿಯಾದ ರಾಯಭಾರಿ ಚೋಯ್ ಬ್ಯುಂಗ್-ಹ್ಯುಕ್ ಅವರನ್ನು ಹೊಸ ರಕ್ಷಣಾ ಸಚಿವರನ್ನಾಗಿ ಹೆಸರಿಸಲಾಗಿದೆ. ಇನ್ನು ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಅವರ ಪಕ್ಷವು ಸಂಸತ್ತಿನಲ್ಲಿ ಕಡಿಮೆ ಬೆಂಬಲವನ್ನು ಹೊಂದಿದ್ದು, ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷ ಸಂಸತ್ತಿನಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿದೆ. ಈ ಸಂದರ್ಭದಲ್ಲಿ ಆಡಳಿತಾರೂಢ ಪೀಪಲ್ಸ್ ಪವರ್ ಪಕ್ಷದ ಪ್ರತಿ ನಿರ್ಧಾರವನ್ನು ವಿರೋಧ ಪಕ್ಷವು ಸಂಸತ್ತಿನಲ್ಲಿ ರದ್ದುಪಡಿಸುತ್ತದೆ.
ಕಿಮ್ ಅವರನ್ನು ಅಧ್ಯಕ್ಷ ಯೂನ್ ಅವರ ವಿಶ್ವಾಸಾರ್ಹ ವ್ಯಕ್ತಿ ಎಂದು ಹೇಳಲಾಗುತ್ತದೆ. ಸಂಪುಟದ 12 ಸಚಿವರು ಈಗಾಗಲೇ ರಾಜೀನಾಮೆ ಸಲ್ಲಿಸಿದ್ದಾರೆ. ಇನ್ನೂ ಹಲವು ಪ್ರಮುಖ ನಾಯಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.