ಮುಂಬೈ: ಬಾಬರಿ ಮಸೀದಿ ಧ್ವಂಸ ಮಾಡಿದವರಿಗೆ ಶುಭಾಶಯ ಕೋರಿ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾವು ಪತ್ರಿಕೆಗಳಿಗೆ ಜಾಹೀರಾತು ನೀಡಿದ್ದನ್ನು ಆಕ್ಷೇಪಿಸಿ ಸಮಾಜವಾದಿ ಪಕ್ಷವು ಮಹಾರಾಷ್ಟ್ರದಲ್ಲಿ ‘ಮಹಾ ವಿಕಾಸ ಆಘಾಡಿ’ (ಎಂವಿಎ) ಮೈತ್ರಿಕೂಟದಿಂದ ಹೊರಬರಲು ನಿರ್ಧರಿಸಿದೆ.
ಬಾಬ್ರಿ ಮಸೀದಿಯ ಧ್ವಂಸ ಘಟನೆಗೆ ಇದೀಗ 31 ವರ್ಷ. 1992ರಲ್ಲಿ ನಡೆದಿದ್ದ ಈ ಘಟನೆಯಲ್ಲಿ ಸುಮಾರು 2,000 ಕ್ಕೂ ಹೆಚ್ಚು ಜನರ ಸಾವಿಗೀಡಾಗಿದ್ದರು. ಬಾಬ್ರಿ ಮಸೀದಿ ಧ್ವಂಸಗೊಂಡು 31 ವರ್ಷಗಳಾಗಿದ್ದರೂ, ಈ ಘಟನೆಯನ್ನು ಸ್ವಾತಂತ್ರ್ಯದ ನಂತರ ಭಾರತದ ಕರಾಳ ದಿನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದು ದೇಶದ ರಾಜಕೀಯದ ದಿಶೆಯನ್ನೇ ಬದಲಾಯಿಸಿತ್ತು. ಬಾಬರಿ ಮಸೀದಿ ಧ್ವಂಸ ಮಾಡಿದವರಿಗೆ ಶುಭಾಶಯ ಕೋರುವ ಜಾಹೀರಾತನ್ನು ಶಿವಸೇನಾ (ಉದ್ಧವ್ ಬಣ) ನೀಡಿದೆ. ಇದು ಎಸ್‌ಪಿ ಆಕ್ರೋಶಕ್ಕೆ ಕಾರಣವಾಗಿದೆ.
ವರದಿಗಳ ಪ್ರಕಾರ, ಬಾಬ್ರಿ ಮಸೀದಿ ಧ್ವಂಸವನ್ನು ಸಮರ್ಥಿಸಿ, ಸಂಭ್ರಮಿಸಿ ಶಿವಸೇನೆ (ಯುಬಿಟಿ) ಎಂಎಲ್‌ಸಿ ಹಾಗೂ ಉದ್ದವ್ ಠಾಕ್ರೆ ಅವರ ಆಪ್ತ ಸಹಾಯಕ ಮಿಲಿಂದ್ ನಾರ್ವೇಕರ್ ಎಕ್ಸ್‌ನಲ್ಲಿ ಹಾಕಿದ್ದ ಪೋಸ್ಟ್ ಎಸ್‌ಪಿ ನಾಯಕರನ್ನು ಕೆರಳಿಸಿದೆ. ಮಿಲಿಂದ್ ಹಂಚಿಕೊಂಡಿದ್ದ ಪೋಸ್ಟ್‌ನಲ್ಲಿ ಶಿವಸೇನೆ ಸಂಸ್ಥಾಪಕ ದಿವಂಗತ ಬಾಳಾಸಾಹೇಬ್ ಠಾಕ್ರೆ, ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಫೋಟೋಗಳಿವೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಮಾಜವಾದಿ ಪಕ್ಷದ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಅಬು ಆಜ್ಮಿ, ‘ಬಾಬರಿ ಮಸೀದಿ ಧ್ವಂಸ ಮಾಡಿದವರಿಗೆ ಶುಭಾಶಯ ಕೋರುವ ಜಾಹೀರಾತನ್ನು ಶಿವಸೇನಾ (ಉದ್ಧವ್ ಬಣ) ನೀಡಿದೆ. ಉದ್ಧವ್ ಅವರ ಆಪ್ತ ಮಿಲಿಂದ್ ನಾರ್ವೇಕರ್ ಕೂಡ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಆದ್ದರಿಂದ ನಾವು ಮೈತ್ರಿಕೂಟ ವನ್ನು ತೊರೆಯುತ್ತಿದ್ದೇವೆ. ಈ ಬಗ್ಗೆ ನಮ್ಮ ನಾಯಕ ಅಖಿಲೇಶ್ ಯಾದವ್ ಅವರೊಂದಿಗೂ ಮಾತನಾಡುತ್ತೇನೆ’ ಎಂದು ಹೇಳಿದ್ದಾರೆ.
‘ಸಂವಿಧಾನವನ್ನು ಉಳಿಸುವುದು ಮತ್ತು ಜಾತ್ಯತೀತ ತತ್ವಗಳ ಆಧಾರ ದಲ್ಲಿ ಮಹಾ ವಿಕಾಸ ಆಘಾಡಿ ರೂಪು ಗೊಂಡಿತ್ತು. ಈಗ ಆಘಾಡಿ ಯವರೇ ಇಂಥ ಭಾಷೆ ಬಳಸಿದರೆ, ಬಿಜೆಪಿಗೂ ಅವರಿಗೂ ಯಾವ ವ್ಯತ್ಯಾಸ ಇದೆ. ನಾವು ಯಾಕೆ ಅಂಥವರೊಂದಿಗೆ ಇರಬೇಕು. ಇಂಥ ಭಾಷೆ ಬಳಸುವವರ ಜೊತೆ ಮೈತ್ರಿ ಮಾಡಕೊಳ್ಳಬೇಕೇ, ಬೇಡವೇ ಎನ್ನುವ ಕುರಿತು ಕಾಂಗ್ರೆಸ್ ನಿರ್ಧರಿಸಬೇಕು’ ಎಂದು ಆಜ್ಮಿ ಹೇಳಿದ್ದಾರೆ. ಆಘಾಡಿ ತೊರೆಯುವ ಕುರಿತು ಅಖಿಲೇಶ್ ಯಾದವ್ ಅವರು ಈವರೆಗೂ ಯಾವ ಹೇಳಿಕೆಯನ್ನೂ ನೀಡಿಲ್ಲ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 12 ಸ್ಥಾನಗಳನ್ನು ನೀಡುವಂತೆ ಸಮಾಜವಾದಿ ಪಕ್ಷವು ಆಗ್ರಹಿಸಿತ್ತು. ಆದರೆ, ಪಕ್ಷಕ್ಕೆ ಆರು ಸ್ಥಾನಗಳನ್ನು ನೀಡಲಾಗಿತ್ತು. ಈ ಸ್ಥಾನಗಳ ಪೈಕಿ ಎರಡರಲ್ಲಿ ಪಕ್ಷ ಜಯಗಳಿಸಿದೆ.