ಚಿತ್ರದುರ್ಗ: ಕ್ರೀಡೆ ಎನ್ನುವುದು ಹವ್ಯಾಸವಾಗಬಾರದು ಅದು ತಪ್ಪಸ್ಸಿನ ರೀತಿಯಲ್ಲಿ ಸಾಧನೆಯನ್ನು ಮಾಡಬೇಕಿದೆ. ಉತ್ತಮ ಕ್ರೀಡಾ ಪಟುವಾಗಲು ಉತ್ತಮವಾದ ತರಬೇತಿದಾರರ ಅಗತ್ಯವಿದೆ. ಇವರಲ್ಲಿ ತರಬೇತಿಯನ್ನು ಪಡೆದ ಕ್ರೀಡಾಪಟು ಮುಂದೆ ಉತ್ತಮ ಕ್ರೀಡಾಪಟುವಾಗಬಹುದಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ತಿಳಿಸಿದರು.
ಕಾಲೇಜು ಶಿಕ್ಷಣ ಇಲಾಖೆ, ದಾವಣಗೆರೆ ವಿಶ್ವ ವಿದ್ಯಾನಿಲಯ ಮತ್ತು ದಾವಣಗೆರೆ ವಿಶ್ವ ವಿದ್ಯಾನಿಲಯ ದೈಹಿಕ ಶಿಕ್ಷಣ ನಿರ್ದೇಶಕರ ಸಂಘ ಹಾಗೂ ಸರ್ಕಾರಿ ವಿಜ್ಞಾನ ಕಾಲೇಜು ಸಂಯುಕ್ತಾಶ್ರಯದಲ್ಲಿ ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಅ. 28 ರಿಂದ ಹಮ್ಮಿಕೊಂಡಿದ್ದ ಮೂರು ದಿನದ ದಾವಣಗೆರೆ ವಿಶ್ವ ವಿದ್ಯಾನಿಲಯದ ಅಂತರ ಕಾಲೇಜು ಪುರುಷ ಹಾಗೂ ಮಹಿಳೆಯರ 14ನೇ ಅಥ್ಲೆಟಿಕ್ಸ್ ಕ್ರೀಡಾಕೂಟ ಮತ್ತು 2025-26ನೇ ಸಾಲಿನ ದಾವಣಗೆರೆ ವಿಶ್ವ ವಿದ್ಯಾನಿಲಯದ ತಂಡದ ಆಯ್ಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತ ದೇಶ ಒಂದು ಕಾಲದಲ್ಲಿ ಕ್ರೀಡೆಯಲ್ಲಿ ಹಿಂದೆ ಇತ್ತು ಆದರೆ ನರೇಂದ್ರ ಮೋದಿಯವರು ದೇಶದ ಪ್ರಧಾನ ಮಂತ್ರಿಗಳಾದ ಮೇಲೆ ಕ್ರೀಡೆಗೆ ಹೆಚ್ಚಿನ ಉತ್ತೇಜನವನ್ನು ನೀಡಿದರು. ಕ್ರೀಡಾ ಶಾಲೆಗಳನ್ನು ತೆರೆಯುವುದರ ಮೂಲಕ ಕೇಲ್ ಇಂಡಿಯವನ್ನು ಪ್ರಾರಂಭ ಮಾಡುವುದರ ಮೂಲಕ ಕ್ರೀಡೆಗೆ ಉತ್ತೇಜನ ನೀಡಿದರು. ಇದರ ಪರಿಣಾಮವಾಗಿ ಎರಡು ಒಲಂಪಿಕ್ ಪಂದ್ಯಾವಳಿಯಲ್ಲಿ ಪದಕಗಳನ್ನು ಗಳಿಸಿದರು. ಭಾರತ ದೇಶಕ್ಕೆ 2036ರಲ್ಲಿ ದೆಹಲಿಯಲ್ಲಿ ಓಲಂಪಿಕ್ ಪಂದ್ಯಾವಳಿಯನ್ನು ನಡೆಸಲು ಅನುಮತಿ ಸಿಕ್ಕಿದೆ ಇದರ ಪರಿಣಾಮವಾಗಿ ಈಗಾಗಲೇ ಸಿದ್ದತೆಯನ್ನು ಮಾಡಲಾಗಿದೆ. ಈ ಪಂದ್ಯಾವಳಿಯಲ್ಲಿ ದಾವಣಗೆರೆ ವಿ.ವಿ.ಯಿಂದ ಕ್ರೀಡಾಪಟುಗಳು ಭಾಗವಹಿಸಿ ಬಂಗಾರದ ಪದಕವನ್ನುಗಳಿಸುವಂತೆ ಮಾಡಬೇಕಾಗಿದೆ ಇದಕ್ಕೆ ತರಬೇತಿದಾರರು ಈಗಿನಿಂದಲೇ ತಯಾರಿಯನ್ನು ಮಾಡಬೇಕಿದೆ ಎಂದರು.
ಬಹುತೇಕ ಶಾಲೆಗಳಲ್ಲಿ ದೈಹಿಕ ಶಿಕ್ಷಕರು ಇಲ್ಲ ಎಂಬ ಮಾತನ್ನು ಇಲ್ಲಿ ಹೇಳಲಾಗಿದೆ ಇದರ ಬಗ್ಗೆ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಮಾತನಾಡುವುದಲ್ಲದೆ ಸಂಬಂಧಪಟ್ಟ ಸಚಿವರ ಜೊತೆಯಲ್ಲಿಯೂ ಸಹಾ ಮಾತನಾಡಿ ದೈಹಿಕ ಶಿಕ್ಷಕರ ನೇಮಕಾತಿಯ ಬಗ್ಗೆ ಮನವರಿಕೆಯನ್ನು ಮಾಡಿಕೊಡಲಾಗುವುದೆಂದ ಅವರು, ಪರೀಕ್ಷೆ ಸಮಯದಲ್ಲಿ ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ವಿಶೇಷವಾಗಿ ಪರಿಕ್ಷೆಯನ್ನು ನೀಡುತ್ತಿರುವ ದಾವಣಗೆರೆ ವಿವಿಯ ಕಾರ್ಯ ನಿಜಕ್ಕೂ ಶ್ಲಾಘನೀಯ, ಇದ್ದಲ್ಲದೆ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಆರ್ಥಿಕವಾಗಿ ಸಹಾಯವನ್ನು ಮಾಡುತ್ತಿರುವುದು ನಿಜಕ್ಕೂ ಸಹಾ ಉತ್ತಮವಾದ ಕೆಲಸವಾಗಿದೆ ಎಂದರು.
ಕ್ರೀಡಾ ತರಬೇತಿದಾರರು ಇಲ್ಲದೆ ಯಾವ ಕ್ರೀಡಾ ಪಟುವೂ ಸಹಾ ಪರಿಪೂರ್ಣವಾದ ಕ್ರೀಡಾ ಪಟುವಾಗಲು ಸಾಧ್ಯವಿಲ್ಲ ನಾವು ಎಷ್ಟೇ ಕಲಿತರು ಸಹಾ ದೈಹಿಕ ಶಿಕ್ಷಕರಿಂದ ಕಲಿಯುವುದು ಬಹಳ ಇರುತ್ತದೆ ಈ ಹಿನ್ನಲೆಯಲ್ಲಿ ಪ್ರತಿಯೊಂದು ಶಾಲಾ-ಕಾಲೇಜಿನಲ್ಲಿಯೂ ದೈಹಿಕ ಶಿಕ್ಷಕರು ಅಗತ್ಯವಾಗಿ ಇರಬೇಕಿದೆ ಇದರಿಂದ ಅಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಲಿದೆ ಎಂದು ನವೀನ್ ತಿಳಿಸಿದರು.
ಕ್ರೀಡಾಕೂಟದ ಧ್ವಜಾರೋಹಣವನ್ನು ನೇರವೇರಿಸಿದ ದಾವಣಗೆರೆ ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಬಿ.ಡಿ.ಕುಂಬಾರ್ ಮಾತನಾಡಿ, ಇಂದಿನ ದಿನಮಾನದಲ್ಲಿ ಪಾಠ ಪ್ರವಚನದ ಜೊತೆಗೆ ಆಟವೂ ಸಹಾ ಅತಿ ಅಗತ್ಯವಾಗಿದೆ. ದೈಹಿಕವಾಗಿ ಸಧೃಡವಾಗಿದ್ಧಾಗ ಮಾತ್ರ ಮಾನಸಿಕವಾಗಿಯೂ ಸದೃಢವಾಗಿ ಇರಲು ಸಾಧ್ಯವಿದೆ. ಈ ರೀತಿಯಾದ ಕ್ರೀಡಾ ಕೂಟದಲ್ಲಿ ಕ್ರೀಡಾಪಟುಗಳು ಉತ್ಸಾಹದಿಂದ ಭಾಗವಹಿಸಬೇಕಿದೆ. ನಮ್ಮ ದಾವಣಗೆರೆ ವಿವಿಯ 100 ಕಾಲೇಜುಗಳಿಂದ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬೇಕಿತ್ತು ಆದರೆ ಕಡಿಮೆ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ ಕೆಲವು ಕಾಲೇಜಿನಿಂದ ಕಡಿಮೆ ಕ್ರೀಡಾಪಟುಗಳು ಭಾಗವಹಿಸಿದ್ದೀರಾ, ಮುಂದಿನ ದಿನದಲ್ಲಿ ಈ ರೀತಿಯ ಕ್ರೀಡಾಕೂಟಕ್ಕೆ ಒಂದು ಕಾಲೇಜಿನಿಂದ ಕನಿಷ್ಠ 25 ವಿದ್ಯಾಥಿಗಳು ಭಾಗವಹಿಸಬೇಕಿದೆ. ಒಲಂಪಿಕ್ ಕ್ರೀಡೆಯಲ್ಲಿ ನಮ್ಮ ದೇಶ ಎಲ್ಲಿದೆ ಎಂದು ಎಲ್ಲರಿಗೂ ಸಹಾ ತಿಳಿಯುತ್ತಿದೆ. ಅದರಲ್ಲೂ ಅಥ್ಲೆಟಿಕ್ಸ್ ಕ್ರೀಡೆಯಲ್ಲಿ ತುಂಬಾ ಹಿಂದೆ ಉಳಿದಿದ್ದೇವೆ ಇದರಿಂದ ವಿದ್ಯಾರ್ಥಿಗಳು ಅಥ್ಕೆಟಿಕ್ಸ್ನಲ್ಲಿ ಸಕ್ರಿಯವಾಗಿ ಭಾಗವಹಿಸಿ ಮುಂದಿನ ದಿನದಲ್ಲಿ ಪದಕಗಳನ್ನು ಪಡೆಯಬೇಕಿದೆ ಎಂದರು.
ಕ್ರೀಡಾಕೂಟದ ಅಧ್ಯಕ್ಷತೆಯನ್ನು ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ರವಿಕಾಂತ್ ವಹಿಸಿದ್ದರು. ಅಜೇಯ್ ಪ್ರಾರ್ಥಿಸಿದರು. ಸತೀಶ್ ಗೌಡ ಸ್ವಾಗತಿಸಿದರೆ ಕ್ರೀಡಾಕೂಟದ ಕಾರ್ಯದರ್ಶಿಗಳಾದ ಡಾ.ರಾಘವೇಂದ್ರ ಪ್ರಸ್ತಾವಿಕ ನುಡಿಗಳನ್ನಾಡಿದರು. ಸುನೀಲ್ ವಂದಿಸಿದರು. ಲಾಲ್ಸಿಂಗ್ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.
ಕ್ರೀಡಾಕೂಟದಲ್ಲಿ ದಾವಣಗೆರೆ ವಿಶ್ವ ವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಹಚ್.ತಿಪ್ಪೇಸ್ವಾಮಿ, ದಾವಣಗೆರೆ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಅಧ್ಯಕ್ಷರಾದ ಶಂಕರಪ್ಪ, ದೈಹಿಕ ನಿರ್ದೆಶಕರಾದ ಬಸವರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಚನ್ನಯ್ಯ, ಕಾರ್ಯದರ್ಶಿ ನಾಗರಾಜು, ಬಸವರಾಜು, ಅಭಾವಿಮದ ಅಧ್ಯಕ್ಷ ಆನಂದ ರೋಟೇರಿಯನ್ ಎಸ್.ವೀರೇಶ್, ವೀರಭದ್ರಸ್ವಾಮಿ, ಮಹಡಿ ಶಿವಮೂರ್ತಿ, ಸರ್ಕಾರಿ ವಿಜ್ಞಾನ ಕಾಲೇಜಿನ ಅಭೀವೃದ್ದಿ ಸಮಿತಿಯ ಸದಸ್ಯರಾದ ಹೆಚ್,ವರದಶಂಕರ್, ಮಂಜುನಾಥ್ ಭಾಗವಹಿಸಿದ್ದರು.
ದಾವಣಗೆರೆ ವಿಶ್ವ ವಿದ್ಯಾನಿಲಯ ವ್ಯಾಪ್ತಿಯ ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ವಿವಿಧ ಕಾಲೇಜುಗಳ ಕ್ರೀಡಾಪಟುಗಳು ಇದರಲ್ಲಿ ಭಾಗವಹಿಸಿದ್ದರು.

































