ಚಿತ್ರದುರ್ಗ: ಶ್ರೀ ಚಿನ್ಮೂಲಾದ್ರಿ ಬೃಹನ್ಮಠ ಮಹಾ ಸಂಸ್ಥಾನ, ಇವರ ಅಡಳಿತಕ್ಕೆ ಒಳಪಟ್ಟಿರುವ ಚಿತ್ರದುರ್ಗ ತಾಲ್ಲೂಕು, ಹಿರೇಗುಂಟನೂರು ಹೋಬಳಿ, ಭೀಮಸಮುದ್ರ ಮಜುರೆ ಬಸವಾಪುರದ ಶ್ರೀ ಮಾವಿನಹಳ್ಳಿ ಬಸವೇಶ್ವರಸ್ವಾಮಿ ರಥೋತ್ಸವವು ಮಾ. 4 ರಿಂದ 9 ವರೆಗೆ ನಡೆಯಲಿದೆ ಎಂದು ಶ್ರೀ ಮಾವಿನಹಳ್ಳಿ ಬಸವೇಶ್ವರಸ್ವಾಮಿ ಟ್ರಸ್ಟ್ ತಿಳಿಸಿದೆ.
ಮಾ. 04 ರಂದು ಸ್ವಾಮಿಗೆ ಮಹಾ ರುದ್ರಾಭೀಷೇಕ ಕಂಕಣ ಧಾರಣೆ ಪಲ್ಲಕ್ಕಿ ಉತ್ಸವ ಧ್ವಜಾರೋಹಣ ಸೇವೆ,ಮಾ. 5 ರಂದು “ಅಪ್ಪೋತ್ಸವ” ಸೇವೆ,ಮಾ. 06 ರಂದು ವೃಷಭೋತ್ಸವ ಸೇವೆ, ಮಾ. 07 ರಂದು ಬೆಳಿಗ್ಗೆ 6 ಗಂಟೆಗೆ ಹೂವಿನ ಉತ್ಸವ ಸೇವೆ, ನಂತರ ಗಜೋತ್ಸವ, ತದ ನಂತರ 10 ಗಂಟೆಗೆ ಸ್ವಾಮಿಗೆ ಕೆಂಡಾರ್ಚನೆ ಸೇವೆ ನಡೆಯಲಿದೆ. ಮಾ. 8 ರಂದು ಬೆಳಿಗ್ಗೆ 11 ಗಂಟೆಗೆ ಸಾಮೂಹಿಕ ವಿವಾಹ ಮಹೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ವಿವಾಹವಾಗುವ ಮಧು-ವರರಿಗೆ ಬಟ್ಟೆ, ತಾಳಿ ನೀಡಲಾಗುವುದು ಅಸಕ್ತರು ದೇವಸ್ಥಾನದಲ್ಲಿ ಹೆಸರನ್ನು ನೊಂದಾಯಿಸಬಹುದಾಗಿದೆ.
ಸಂಜೆ 4.30 ಗಂಟೆಗೆ ಹೂವಿನ ಅಡ್ಡ ಪಲ್ಲಕ್ಕಿ ಉತ್ಸವ ಸೇವೆ ನಡೆಯಲಿದ್ದು ತದ ನಂತರ ಸ್ವಾಮಿಯ ರಥೋತ್ಸವ ಕಾರ್ಯಕ್ರಮ ನಡೆಯಲಿದೆ, ಕೆಂಡಾರ್ಚನೆ ಮತ್ತು ರಥೋತ್ಸವ ಸಮಯದಲ್ಲಿ ಆಗಮಿಸುವ ಭಕ್ತಾಧಿಗಳಿಗೆ ದಾಸೋಹ ಸೇವೆಯನ್ನು ಏರ್ಪಡಿಸಲಾಗಿದೆ. ಮಾ. 9ರ ಶನಿವಾರ ಸಂಜೆ 4 ಗಂಟೆಗೆ ಸ್ವಾಮಿಯ ಕಂಕಣ ವಿಸರ್ಜನೆ, ಮಹಾ ಮಂಗಳಾರತಿಯೊಂದಿಗೆ ಶ್ರೀ ಸ್ವಾಮಿಯ ಸೇವಾ ಕಾರ್ಯಕ್ರಮಗಳು ಮುಕ್ತಾಯವಾಗಲಿದೆ.
ಶ್ರೀ ಸ್ವಾಮಿಯ ದೇವಸ್ಥಾನದ ನೂತನ ಕಟ್ಟಡದ ಕಾರ್ಯ ಪ್ರಗತಿಯಲ್ಲಿದ್ದು ಇದರ ಅಂದಾಜು ಮೊತ್ತ ಸುಮಾರು ರೂ.5 ಕೋಟಿಗಳಾಗಿರುತ್ತದೆ. ಆದ್ದರಿಂದ ಭಕ್ತಾದಿಗಳು ನೂತನ ದೇವಸ್ಥಾನದ ನಿರ್ಮಾಣಕ್ಕೆ ಹೆಚ್ಚಿನ ಧನಸಹಾಯ ಮಾಡುವವರು ಹಾಗೂ ವಾಗ್ದಾನ ಮಾಡಿರುವವರು ಜಾತ್ರಾ ಸಮಯದಲ್ಲಿ ಹಣವನ್ನು ಕೊಟ್ಟು ಶ್ರೀ ಸ್ವಾಮಿ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ ಮಾಡಲಾಗಿದೆ. ಇದ್ದಲ್ಲದೆ ಹಿಂದಿನ ವರ್ಷ ರಥೋತ್ಸವ ಸಮಯದಲ್ಲಿ ಭಾವುಟ ಮತ್ತು ಹೂವಿನ ಹಾರಗಳನ್ನು ಹರಾಜಿನಲ್ಲಿ ಪಡೆದವರು ಶ್ರೀ ಸ್ವಾಮಿಯ ರಥೋತ್ಸವದ ದಿವಸ ಹಣ ಕೊಟ್ಟು ರಸೀದಿಯನ್ನು ಪಡೆಯಬೇಕೆಂದು ಶ್ರೀ ಮಾವಿನಹಳ್ಳಿ ಬಸವೇಶ್ವರಸ್ವಾಮಿ ಟ್ರಸ್ಟ್ ಮನವಿ ಮಾಡಿದೆ.