ಬೆಂಗಳೂರು: ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.20ರಷ್ಟು ಕೃಪಾಂಕ (ಗ್ರೇಸ್ ಮಾರ್ಕ್ಸ್) ನೀಡಿದ ಶಿಕ್ಷಣ ಇಲಾಖೆ ಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿದ್ದು, ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕತೆ ಹಾಗೂ ಶಿಕ್ಷಣದ ಗುಣಮಟ್ಟ ಕುಸಿತಕ್ಕೆ ಕಾರಣವಾಗುವ ಕೃಪಾಂಕ ಪದ್ಧತಿಯನ್ನು ಮುಂದಿನ ವರ್ಷದಿಂದ ಕೈಬಿಡುವಂತೆ ಸೂಚಿಸಿದ್ದಾರೆ. ವಿಧಾನಸೌಧದಲ್ಲಿ ಕರೆದಿದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಅಧಿಕಾರಿಗಳ ಜತೆಗಿನ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿದ ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾರನ್ನು ಕೇಳಿ ಕೃಪಾಂಕ ನೀಡಿದ್ದೀರಿ ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರನ್ನು ಸಿಎಂ ತರಾಟೆಗೆ ತೆಗೆದುಕೊಂಡಿದ್ದು, ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಉಪಸ್ಥಿತಿಯಲ್ಲಿ ಈ ಬೆಳವಣಿಗೆ ನಡೆದಿದೆ. ಈ ಸಂದರ್ಭ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೋವಿಡ್ ಸಂದರ್ಭದಲ್ಲಿ ಶೇಕಡಾ 5-10 ಕೃಪಾಂಕ ಕೊಡುತ್ತಿದ್ದೆವು. ಈ ಬಾರಿ ಅದನ್ನು ಹೆಚ್ಚಿಸಿದ್ದೇವೆ ಎಂದು ಸಮಜಾಯಿಷಿ ನೀಡಿದರು. ಇದನ್ನು ಒಪ್ಪದ ಮುಖ್ಯಮಂತ್ರಿಗಳು, ಕೋವಿಡ್ ಇದ್ದಾಗ ಕೃಪಾಂಕ ನೀಡಿದ್ದನ್ನು ಒಪ್ಪಿಕೊಳ್ಳಬಹುದು. ಆದರೆ ಈಗ ಶೇ.20 ಕೃಪಾಂಕ ನೀಡುವ ಅಗತ್ಯವೇನಿದೆ ಎಂದು ಮರುಪ್ರಶ್ನಿಸಿದರು. ಮಧ್ಯಪ್ರವೇಶಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, ವಿದ್ಯಾರ್ಥಿಗಳು ಅವರ ಅರ್ಹತೆಯ ಆಧಾರದಲ್ಲಿ ಪ್ರಗತಿ ಸಾಧಿಸಬೇಕು. ಕೃಪಾಂಕ ನೀಡಿದರೆ ಸ್ಪರ್ಧಾ ಸಾಮರ್ಥ್ಯ ಕಡಿಮೆ ಆಗುತ್ತದೆ. ಕಡಿಮೆ ಅಂಕ ಪಡೆದರೆ ವಿದ್ಯಾರ್ಥಿಗಳು ಅನರ್ಹರೇ? ನಾನು 300 ಅಂಕ ಪಡೆದಿದ್ದೆ. ಹಾಗೆಂದು ನನ್ನನ್ನು ಅಸಮರ್ಥ ಎನ್ನುತ್ತೀರಾ ಎಂದು ಅಧಿಕಾರಿಗಳಿಗೆ ಚಾಟಿ ಬೀಸಿದರು. ಈ ರೀತಿ ಆದರೆ ಬೋರ್ಡ್ ಪರೀಕ್ಷೆ ನಡೆಸುವ ಅಗತ್ಯವೇನಿದೆ? 10-15 ಅಂಕ ಪಡೆದು ಪರೀಕ್ಷೆ ಉತ್ತೀರ್ಣರಾಗಲು ಅಸಮರ್ಥರಾಗಿರುವವರಿಗೆ ನೆರವು ನೀಡಿ, ವರ್ಷವಿಡೀ ಕಠಿನ ಪರಿಶ್ರಮ ದಿಂದ ಓದುವ ಮಕ್ಕಳಗೆ ಅನ್ಯಾಯ ಎಸಗುವುದು ಸರಿಯೇ ಎಂದು ಅಧಿ ಕಾರಿ ಗಳನ್ನು ಮುಖ್ಯಮಂತ್ರಿಗಳು ತರಾಟೆಗೆ ತೆಗೆದುಕೊಂಡರು ಎಂದು ತಿಳಿದುಬಂದಿದೆ. ಬಳಿಕ ಮತ್ತೆ ಮಾತನಾಡಿದ ಮುಖ್ಯ ಮಂತ್ರಿಗಳು, ಕೃಪಾಂಕ ಕೊಡುವುದು ಅವೈಜ್ಞಾನಿಕ ಎಂಬ ಬಗ್ಗೆ ಶಿಕ್ಷಣ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪರೀಕ್ಷೆಯಲ್ಲಿ ನಕಲು ಮಾಡುವುದನ್ನು ತಡೆಯಲು ಈ ಬಾರಿ ಕಠಿನ ಕ್ರಮ ಕೈಗೊಂಡಿರುವುದು ಸರಿ. ಆದರೆ ಅವರಿಗೆ ಕೃಪಾಂಕ ನೀಡಿರುವುದು ಸೂಕ್ತವಲ್ಲ ಎಂದು ಮುಖ್ಯಮಂತ್ರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.