ಬೆಂಗಳೂರು: ಶಿಕ್ಷಕರ ದಿನಾಚರಣೆ ದಿನವೇ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ.
2023-24ನೇ ಶೈಕ್ಷಣಿಕ ಸಾಲಿನಿಂದ SSLC, 2nd PUC ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಇದುವರೆಗೆ ವರ್ಷಕ್ಕೆ 2 ಪರೀಕ್ಷೆ ಮಾತ್ರ ನಡೆಸುತ್ತಿದ್ದ ಶಿಕ್ಷಣ ಇಲಾಖೆ ಇನ್ಮುಂದೆ ವರ್ಷಕ್ಕೆ ಮೂರು ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಿದೆ.
ಶೈಕ್ಷಣಿಕ ಪ್ರಗತಿ, ಅರ್ಥಪೂರ್ಣ ಕಲಿಕೆ, ಜ್ಞಾನಧಾರಣೆ ವೃದ್ಧಿಸುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ನಡೆಸಲಿರುವ 3 ಪರೀಕ್ಷೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ವೇಳಾಪಟ್ಟಿ
ಪರೀಕ್ಷೆ-1 ಮಾರ್ಚ್ 1ರಿಂದ ಮಾರ್ಚ್ 25ರವರೆಗೆ ನಡೆಸಲು ನಿರ್ಧಾರ
ಪರೀಕ್ಷೆ-2 ಮೇ 15ರಿಂದ ಜೂನ್ 5ರವರೆಗೆ ನಡೆಸಲು ನಿರ್ಧಾರ
ಪರೀಕ್ಷೆ-3 ಜುಲೈ 12ರಿಂದ ಜುಲೈ 30ರವರೆಗೆ ನಡೆಸಲು ನಿರ್ಧಾರ
10ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಲಿರುವ 3 ಪರೀಕ್ಷೆಗಳ ವೇಳಾಪಟ್ಟಿ
ಪರೀಕ್ಷೆ-1: ಮಾರ್ಚ್ 30ರಿಂದ ಏಪ್ರಿಲ್ 15ರವರೆಗೆ ನಡೆಸಲು ನಿರ್ಧಾರ
ಪರೀಕ್ಷೆ-2: ಜೂನ್ 12ರಿಂದ ಜೂನ್ 19ರವರೆಗೆ ನಡೆಸಲು ನಿರ್ಧಾರ
ಪರೀಕ್ಷೆ-3: ಜುಲೈ 29ರಿಂದ ಆಗಸ್ಟ್ 5ರವರೆಗೆ ನಡೆಸಲು ತೀರ್ಮಾನ
ವಿಧಾನಸಸೌಧದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇದನ್ನು ಘೋಷಿಸಿದರು. ಈ ನಿಯಮದ ಪ್ರಕಾರ ವಿದ್ಯಾರ್ಥಿಗಳು, ಕೆಲ ವಿಷಯಗಳಲ್ಲಿ ಫೇಲ್ ಆದರೂ ಮುಂದಿನ ತರಗತಿ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ.
ಒಟ್ಟು ಅಂಕ ಪೈಕಿ ಕನಿಷ್ಠ ಅಂಕಗಳನ್ನ ತೇರ್ಗಡೆ ಮಾನದಂಡವಾಗಿ ಪರಿಗಣನೆ ಮಾಡಲಾಗುತ್ತದೆ. ಕನಿಷ್ಠ ಅಂಕಗಳೊಂದಿಗೆ ವಿದ್ಯಾರ್ಥಿ ಕೆಲ ವಿಷಯಗಳಲ್ಲಿ ಫೇಲ್ ಆದರೂ ಮುಂದಿನ ತರಗತಿಗೆ ಪ್ರವೇಶಕ್ಕೆ ಅನುಮತಿ ಕಲ್ಪಿಸಲಾಗುತ್ತದೆ. ಕಲಿಕಾ ಗುಣಮಟ್ಟ ಹಾಗೂ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸಲು ಸರ್ಕಾರ ಈ ಹೊಸ ನಿಯಮವನ್ನು ಘೋಷಣೆ ಮಾಡಿದೆ.