ಮಂಗಳೂರು: ಪೆಟ್ರೋಲ್ ಬಂಕ್ ಸಿಬ್ಬಂದಿಯೊಬ್ಬ ತನ್ನದೇ ಕ್ಯುಆರ್ ಕೋಡ್ ಅನ್ನು ಬಂಕ್ ನಲ್ಲಿರಿಸಿ ಮಾಲೀಕರಿಗೆ ವಂಚಿಸಿದ ಘಟನೆ ಮಂಗಳೂರಿನ ಬಂಗ್ರಕುಳೂರು ಎಂಬಲ್ಲಿ ನಡೆದಿದೆ. ಕೊನೆಗೂ ಮಾಲೀಕರ ಅರಿವಿಗೆ ಬಂದಿದೆ. ಸದ್ಯ ಅವರು ನೀಡಿರುವ ದೂರಿನ ಮೇರೆಗೆ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಂಚನೆ ಎಸಗಿದ ಆರೋಪಿಯನ್ನು ಮಂಗಳೂರಿನ ಬಜ್ಪೆ ನಿವಾಸಿ ಮೋಹನದಾಸ್ ಎಂದು ಗುರುತಿಸಲಾಗಿದೆ. ಮಂಗಳೂರಿನ ಬಂಗ್ರಕುಳೂರು ಬಳಿಯ ರಿಲಯನ್ಸ್ ಔಟ್ಲೆಟ್ನಲ್ಲಿ ಬಂಕ್ನ ಸೂಪರ್ ವೈಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದ, ಈತ ಸುಮಾರು 15 ವರ್ಷಗಳಿಂದ ಪೆಟ್ರೋಲ್ ಬಂಕ್ನಲ್ಲಿ ಕೆಲಸಕ್ಕಿದ್ದ ಎನ್ನಲಾಗಿದೆ. ಬಂಕ್ನ ಹಣಕಾಸು ವ್ಯವಹಾರ, ನಿರ್ವಹಣೆ ಜವಬ್ದಾರಿ ಹೊತ್ತಿದ್ದ ಎನ್ನಲಾಗಿದೆ. ಗ್ರಾಹಕರು ಪಾವತಿಗಾಗಿ ಬಳಸಲು ಬಂಕ್ನಲ್ಲಿಟ್ಟಿದ್ದ ಕ್ಯುಆರ್ ಕೋಡ್ ಅನ್ನು ತೆರವು ಮಾಡಿ ಆರೋಪಿ ತನ್ನದೇ ಕ್ಯುಆರ್ ಕೋಡ್ ಇಟ್ಟಿದ್ದ. ಪರಿಣಾಮವಾಗಿ ಗ್ರಾಹಕರು ಪಾವತಿ ಮಾಡಿದ ಹಣ ಸಿಬ್ಬಂದಿಯ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತಿತ್ತು. ಸುಮಾರು 58 ಲಕ್ಷ ಹಣವನ್ನು ವಂಚನೆ ಮಾಡಿದ್ದಾನೆ.
ಆರೋಪಿ ವಿರುದ್ಧ ರಿಲಯನ್ಸ್ ಕಂಪನಿ ಮ್ಯಾನೇಜರ್ ಸಂತೋಷ್ ಮ್ಯಾಥ್ಯೂ ದೂರು ನೀಡಿದ್ದು, ಮಂಗಳೂರಿನ ಸೈಬರ್ ಕ್ರೈಂ ಮತ್ತು ಎಕನಾಮಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಮೋಹನದಾಸನನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.