ಹಾಸನ : ಅರಕಲಗೂಡು ತಾಲೂಕಿನ ಗಡಿಭಾಗ ಸುಳುಗೋಡು ಗ್ರಾಮದಲ್ಲಿ ಜಮೀನನ್ನು ಉಳುಮೆ ಮಾಡುವ ವೇಳೆ ಜೈನ ತೀರ್ಥಂಕರರ ಸುಂದರ ಕೆತ್ತನೆಯ ಪ್ರತಿಮೆ ಮತ್ತು ಸ್ಥಂಭ ರೂಪದ ಕಲಾಕೃತಿ ಪತ್ತೆಯಾಗಿದೆ.
ಮಂಜು ಎಂಬುವವರ ಜಮೀನಿನಲ್ಲಿ ಪುರಾತನ ಕಾಲದ ಅಪರೂಪದ ಕಲಾಕೃತಿ ಗುರುತು ಪತ್ತೆಯಾಗಿದೆ. ಸ್ಥಳೀಯರು ಪುರಾತತ್ವ ಇಲಾಖೆಗೆ ತಕ್ಷಣ ಮಾಹಿತಿ ನೀಡಿದ್ದು, ಜೈನ ಧರ್ಮದ ತೀರ್ಥಂಕರರು ಹಾಗೂ ಸ್ಥಂಭದ ಶಿಲಾಕಲಾಕೃತಿಗಳು ಕಂಡುಬಂದಿದೆ. 40 ವರ್ಷಗಳ ಹಿಂದೆ ಹೇಮಾವತಿ ಜಲಾಶಯ ನಿರ್ಮಾಣವಾದ ಬಳಿಕ ಹಿನ್ನೀರಿನಿಂದ ಮುಳುಗಡೆಯಾದ ಭಾಗದಲ್ಲಿ ಸುಮಾರು 15 ಗ್ರಾಮಗಳ ಜನರು 1963ರಿಂದ ವಾಸಮಾಡಿದ್ದಾರೆ. ಆದ್ದರಿಂದ, ಈ ಪ್ರದೇಶದ ಐತಿಹಾಸಿಕ ಸಂಗತಿಗಳ ಕುರಿತು ನಿಖರ ಮಾಹಿತಿಯ ಕೊರತೆ ಇದ್ದು, ಇಲ್ಲಿನ ಶಿಲಾವಶೇಷಗಳ ಬಗ್ಗೆ ಹೆಚ್ಚಿನ ಮಾಹಿತಿ ಅರಸಲು ಸಂಬಂಧಪಟ್ಟ ಇಲಾಖೆಯವರು ಉತ್ಖನನ ಕಾರ್ಯಗಳನ್ನು ನಡೆಸಬೇಕೆಂದು ಸ್ಥಳೀಯರು ವಿನಂತಿಸಿದ್ದಾರೆ.
ಈ ಪ್ರದೇಶದಿಂದ ಕಲ್ಲಿನ ದೀಪ, ತ್ರಿವಳಿ ಜೈನ ಬಸದಿ, ಶಿಲಾ ವಿಗ್ರಹಗಳು ಮತ್ತು ಶಾಸನ ಕಂಬಗಳಂತಹ ಐತಿಹಾಸಿಕ ಶಿಲಾವಶೇಷಗಳನ್ನು ಸಂರಕ್ಷಿಸಬೇಕೆಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಇನ್ನು, ಬಳಪದ ಕಲ್ಲಿನ ವಿಗ್ರಹಗಳು, ತ್ರಿವಳಿ ಜೈನ ಬಸದಿಗಳು ಮತ್ತು ಶಾಸನ ಕಂಬಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಪೂರೈಸಲು ಈ ಸ್ಥಳವನ್ನು ಸಂರಕ್ಷಿಸಲು ಸ್ಥಳೀಯರು ಆಗ್ರಹಿಸಿದ್ದಾರೆ.