ನವದೆಹಲಿ : ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸುವ ನಾಗರಿಕ ಸೇವಾ ಪರೀಕ್ಷೆಯನ್ನು ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತದೆ. ಅಂತಹ ಕಠಿಣ ಪರೀಕ್ಷೆಯಲ್ಲೂ ಉತ್ತೀರ್ಣರಾಗಿ ಅನೇಕರು ತಮ್ಮ ಕನಸನ್ನು ನನಸಾಗಿಸುತ್ತಾರೆ. ಅಂತಹ ಕಥೆ ಇದು. ಶಾಲಾ ಜೀವನದಲ್ಲೇ ಅನುತ್ತೀರ್ಣಳಾಗಿದ್ದರೂ, ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆಯನ್ನು ಪಾಸ್ ಮಾಡಿ IAS ಅಧಿಕಾರಿಯಾಗಿರುವ ಅಂಜು ಶರ್ಮಾ ಅವರ ಕಥೆ ಈಗ ದೇಶದಾದ್ಯಂತ ಪ್ರೇರಣೆ ಮೂಡಿಸುತ್ತಿದೆ.
ರಾಜಸ್ಥಾನದ ಭರತ್ಪುರದ ನಿವಾಸಿ ಅಂಜು ಶರ್ಮಾ, 12ನೇ ತರಗತಿಯ ಅರ್ಥಶಾಸ್ತ್ರ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದರು. ಅದಕ್ಕೂ ಮೊದಲು 10ನೇ ತರಗತಿಯ ಪ್ರೀ-ಬೋರ್ಡ್ ಪರೀಕ್ಷೆಯ ರಸಾಯನಶಾಸ್ತ್ರದಲ್ಲೂ ವಿಫಲಗೊಂಡಿದ್ದರು. ಈ ಘಟನೆಗಳು ಅವರ ಮನಸ್ಸಿನಲ್ಲಿ ಭಯ ಮತ್ತು ಗೊಂದಲಕ್ಕೆ ಕಾರಣವಾದರೂ, ಅಂಜು ತಮ್ಮ ಓದುತ್ತಿನ ಮೇಲೆ ಮತ್ತಷ್ಟು ಗಮನ ಹರಿಸಲು ಶುರುಮಾಡಿದರು.
ಸೋಲನ್ನು ಸವಾಲಾಗಿ ಪರಿಗಣಿಸಿದ ಅಂಜು, ಕಾಲೇಜು ಮಟ್ಟದಲ್ಲಿ ಅದ್ಭುತ ಸಾಧನೆ ಮಾಡಿದರು. ಜೈಪುರದಲ್ಲಿ ಬಿಎಸ್ಸಿ ಪದವಿ ಪಡೆದು ಚಿನ್ನದ ಪದಕ ಗಳಿಸಿದರು. ನಂತರ ಅವರು ಎಂಬಿಎ ಪೂರ್ಣಗೊಳಿಸಿ, ಯುಪಿಎಸ್ಸಿ ಗುರಿ ಹೊಂದಿದರು.
ಯುಪಿಎಸ್ಸಿ ಪರೀಕ್ಷೆಗೆ ಅಂಜು ಸಂಪೂರ್ಣ ಪ್ಲಾನ್ನೊಂದಿಗೆ ತಯಾರಿ ನಡೆಸಿದರು. ಪಠ್ಯಕ್ರಮವನ್ನು ಮುಂಚಿತವಾಗಿ ಪೂರ್ಣಗೊಳಿಸಿದ ಅವರು, ಪರೀಕ್ಷೆಯ ಮುನ್ನದ ದಿನಗಳಲ್ಲೂ ಒತ್ತಡಕ್ಕೆ ಒಳಗಾಗದೇ ಶಾಂತ ಮನಸ್ಸಿನಿಂದ ರಿವಿಷನ್ ಮಾಡಿದರು. ಯುಪಿಎಸ್ಸಿಯನ್ನು ಅವರು ಒಮ್ಮೆಲೇ ಪಾಸ್ ಮಾಡುವ ಗುರಿಯೊಂದಿಗೆ ಮುಂದುವರೆದರು.
ಸಾರ್ವಜನಿಕ ಸೇವೆಯತ್ತ ತಮ್ಮ ದೃಢನಿಷ್ಠೆ ಮತ್ತು ಪರಿಶ್ರಮದ ನೆರವಿನಿಂದ, ಅಂಜು ಶರ್ಮಾ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ IAS ಅಧಿಕಾರಿಯಾದರು. ಅಂಜು ಶರ್ಮಾ ಅವರ ಪ್ರಯಾಣವು ವಿದ್ಯಾರ್ಥಿಗಳು ಮತ್ತು ಯುಪಿಎಸ್ಸಿ ಕನಸಿನತ್ತ ಹೆಜ್ಜೆ ಹಾಕುತ್ತಿರುವ ಯುವಕರಿಗೆ ಇಂದು ಒಂದು ಸ್ಪೂರ್ತಿದಾಯಕ ಮಾದರಿಯಾಗಿದೆ.
-‘ಸೋತವರೂ ಗೆಲ್ಲುತ್ತಾರೆ, ಒಮ್ಮೆ ಜಾರಿದರೂ ಮತ್ತೆ ಎದ್ದು ನಿಲ್ಲಲು ಧೈರ್ಯ ಇದ್ದರೆ’.































