ನಾಡಿಯಾ : ಸಾಮಾನ್ಯವಾಗಿ ಬೀದಿನಾಯಿಗಳು ಎಂದರೆ ಭಯ ಹುಟ್ಟಿಸುವುದು, ಕಚ್ಚುವುದು ಅಥವಾ ತೊಂದರೆ ಕೊಡುವ ಪ್ರಾಣಿಗಳು ಎಂಬ ಕಲ್ಪನೆ ಬಹುತೇಕ ಜನರ ಮನಸ್ಸಿನಲ್ಲಿ ಗಾಢವಾಗಿದೆ. ಆದರೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ನಡೆದ ಘಟನೆ ಈ ಕಲ್ಪನೆಯನ್ನು ಸಂಪೂರ್ಣವಾಗಿ ತಲೆಕೆಳಗಾಗಿಸಿದೆ. ಜನನವಾದ ಕೆಲವೇ ಗಂಟೆಗಳ ನವಜಾತ ಶಿಶುವನ್ನು ನಾಲ್ಕೈದು ಬೀದಿ ನಾಯಿಗಳು ಗುಂಪಾಗಿ ಕಾವಲು ಕಾದು ರಕ್ಷಿಸಿದ ಘಟನೆ ಸ್ಥಳೀಯರನ್ನು ಆಶ್ವರ್ಯಪಡಿಸಿದೆ.
ರೈಲ್ವೆ ಕಾರ್ಮಿಕರ ವಸತಿ ಪ್ರದೇಶದ ಶೌಚಾಲಯದ ಹೊರಗೆ ಬೀದಿಗೆ ಬಿಡಲಾಗಿದ್ದ ಮಗುವನ್ನು ಮೊದಲ ಬಾರಿಗೆ ಬೆಳಗ್ಗಿನ ವೇಳೆ ಜಾಗಿಂಗ್ನಲ್ಲಿದ್ದ ನಿವಾಸಿಗಳು ಗಮನಿಸಿದ್ದಾರೆ. ಮಗುವಿನ ದೇಹದ ಮೇಲಿನ ಜನನದ ರಕ್ತ ಒಣಗದೇ ಇದ್ದು, ಬಟ್ಟೆ ಇಲ್ಲದ ಸ್ಥಿತಿ, ಚಳಿಯಿಂದ ಕಾಪಾಡಲು ಯಾವುದೇ ವಸ್ತ್ರವಿಲ್ಲದಿದ್ದರೂ ಮಗುವಿನ ರಕ್ಷಣೆಗಾಗಿ ಶ್ವಾನದಳ ಸಜ್ಜಾಗಿತ್ತು. ಹೆತ್ತವರ ಬಳಿ ಇರದಿದ್ದರೂ ಮಗು ಒಂಟಿಯಾಗಿರಲಿಲ್ಲ. ಅದರ ಸುತ್ತಲೂ ಕುಳಿತಿದ್ದ ನಾಲ್ಕೈದು ಬೀದಿ ನಾಯಿಗಳು ಇಡೀ ರಾತ್ರಿ ಮಗುವಿನ ಕಾವಲು ಕಾದಿದ್ದವು.
ದಿನನಿತ್ಯ ಜನರಿಂದ ತುಚ್ಚವಾಗಿ ಕಾಣುವ ಇದೇ ನಾಯಿಗಳೇ ಈ ಮಗುವಿಗೆ ‘ತಾಯಿ’ಯಂತಾಗಿವೆ ಎನ್ನುವ ರೀತಿಯಲ್ಲಿ ವರ್ತಿಸಿದ್ದು ಸ್ಥಳೀಯರಲ್ಲಿ ಆಶ್ಚರ್ಯ ಮೂಡಿಸಿದೆ. ಯಾರನ್ನೂ ಹತ್ತಿರ ಹೋಗದಂತೆ ತಡೆಯುತ್ತಾ, ಮಗು ಅತ್ತಾಗ ಕಳವಳದಿಂದ ಸುತ್ತುವರಿದು ಕಾವಲು ಕಾಯುತ್ತಾ, ರಾತ್ರಿ ಪೂರ್ತಿ ಮಗು ಸುರಕ್ಷಿತವಾಗಿರುವಂತೆ ನೋಡಿಕೊಂಡಿದ್ದವು ಎಂದು ವಸತಿ ಪ್ರದೇಶದ ಜನರು ಹೇಳಿದ್ದಾರೆ.
“ಎದ್ದು ನೋಡಿದಾಗ ನಮ್ಮ ಕಣ್ಣಲ್ಲಿ ನೀರು ಸುರಿಯತೊಟಗಿತ್ತು. ನಿಲ್ಲಿಸಲಾಗಲಿಲ್ಲ, ನಾಯಿಗಳು ಬೊಗಳಲೇ ಇಲ್ಲ, ಕಚ್ಚಲು ಯತ್ನಿಸಲಿಲ್ಲ. ಬದಲಿಗೆ ಮಗುವಿನ ಸುತ್ತ ಕುಳಿತು ಅದರ ಮೇಲೆ ಕಣ್ಣಿಟ್ಟಿದ್ದವು. ನಾಯಿಗಳ ಈ ವರ್ತನೆ ನಿಜಕ್ಕೂ ಆಶ್ಚರ್ಯಕರ,” ಎಂದು ನಿವಾಸಿ ಸುಕ್ಲಾ ಮಂಡಲ್ ಹೇಳಿದ್ದಾರೆ.
ಮತ್ತೊಬ್ಬ ನಿವಾಸಿ ಸುಭಾಷ್ ಮಾತನಾಡಿ, “ಬೆಳಿಗ್ಗೆ ಮಗುವಿನ ಅಳು ಕೇಳಿ ಅದು ಯಾವ ಮನೆಯ ಮಗು ಅನಾರೋಗ್ಯದಿಂದ ಅಳುತ್ತಿದೆ ಎಂದು ಭಾವಿಸಿದ್ದೆ. ಆದರೆ ಅಳುವ ಶಬ್ದದ ಕಡೆ ಹೋಗಿ ನೋಡಿದಾಗ ಶಿಶುವಿನ ಸುತ್ತಲೂ ನಾಯಿಗಳು ಕಾವಲು ಕಾಯುತ್ತಿರುವುದನ್ನು ಕಂಡು ನಂಬಲಾಗಲೇ ಇಲ್ಲ.” ಎಂದರು.
ಸುಕ್ಲಾ ಮಂಡಲ್ ಅವರು ಶಿಶುವಿನ ಬಳಿ ಹೋಗುತ್ತಿದ್ದಂತೆ ನಾಯಿಗಳು ಸ್ವಲ್ಪ ದೂರ ಸರಿದವು. ಬಳಿಕ ಅವರು ಮಗುವನ್ನು ದುಪಟ್ಟಾದಲ್ಲಿ ಸುತ್ತಿ ಮನೆಗೆ ಮಾಹಿತಿ ನೀಡಿದರು. ಸ್ಥಳೀಯರ ಸಹಾಯದಿಂದ ಮಗುವನ್ನು ತಕ್ಷಣ ಮಹೇಶ್ಗಂಜ್ ಆಸ್ಪತ್ರೆಗೆ, ನಂತರ ಕೃಷ್ಣನಗರ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರ ಪ್ರಕಾರ, ಮಗುವಿಗೆ ಯಾವುದೇ ಗಾಯಗಳಿಲ್ಲ. ತಲೆಯ ಮೇಲಿದ್ದ ರಕ್ತ ಜನನ ಸಮಯದಲ್ಲಿನದ್ದು ಆಗಿರಬಹುದು ಎಂದು ಅವರು ತಿಳಿಸಿದ್ದಾರೆ.
ಪೊಲೀಸರು, ಮಾನವೀಯತೆ ಮರೆಯಾದ ಈ ಘಟನೆಗೆ ಕಾರಣವರನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ. ರಾತ್ರಿ ಯಾರೋ ಮಗುವನ್ನು ಅಲ್ಲಿ ಬಿಟ್ಟು ಹೋಗಿರುವ ಸಾಧ್ಯತೆ ಇದೆ ಎಂದು ಅವರು ಶಂಕಿಸಿದ್ದಾರೆ.
































