ಉತ್ತರಾಖಂಡ: ಉತ್ತರ ಭಾರತಾದ್ಯಂತ ಕಳೆದ ಒಂದು ತಿಂಗಳಿನಿಂದ ಭಾರಿ ಮಳೆಯಾಗುತ್ತಿದ್ದು, ಅನೇಕ ಅನಾಹುತಗಳನ್ನು ಸೃಷ್ಟಿಸಿದೆ. ಉತ್ತರಾಖಂಡದಲ್ಲಿ ಭೂಕುಸಿತ, ರಸ್ತೆ ಬಂದ್ ಮತ್ತಿತರ ಅನಾಹುತಗಳಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ನಡುವೆ ಪಿಥೋರ್ಗಢದ ಪರೀಕ್ಷಾ ಕೇಂದ್ರದಲ್ಲಿ ಬಿ.ಇಡಿ ಪರೀಕ್ಷೆ ನಿಗದಿಯಾಗಿತ್ತು. ಯಾವ ಕಾರಣಕ್ಕೂ ಈ ಪರೀಕ್ಷೆಯಿಂದ ತಪ್ಪಿಸಿಕೊಳ್ಳಬಾರದು ಎಂದು ನಾಲ್ವರು ವಿದ್ಯಾರ್ಥಿಗಳು ಖಾಸಗಿ ಹೆಲಿಕಾಪ್ಟರ್ ಬಾಡಿಗೆಗೆ ಪಡೆದು ಪರೀಕ್ಷಾ ಕೇಂದ್ರಕ್ಕೆ ಬಂದಿರುವುದು ಈಗ ಸುದ್ದಿಯಾಗಿದೆ.
ಮಳೆಯಿಂದಾಗಿ ಉತ್ತರಾಖಂಡದಲ್ಲಿ ಎಲ್ಲ ರಸ್ತೆಗಳು ಬಂದ್ ಆಗಿದ್ದವು. ಹೀಗಾಗಿ ರಾಜಸ್ಥಾನದ ನಾಲ್ವರು ವಿದ್ಯಾರ್ಥಿಗಳು ಹೆಲಿಕಾಪ್ಟರ್ ಬಾಡಿಗೆ ಪಡೆದು ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಬರೆದ ನಂತರ ನಾಲ್ವರೂ ಅದೇ ಹೆಲಿಕಾಪ್ಟರ್ ಮೂಲಕ ಹಿಂತಿರುಗಿದ್ದಾರೆ. ಈ ಪರೀಕ್ಷೆಗೆ ಬರಲು ಮತ್ತು ಹೋಗಲು ಅವರು 40 ಸಾವಿರ ರೂಪಾಯಿಗಳಿಗಿಂತ ಹೆಚ್ಚು ಖರ್ಚು ಮಾಡಬೇಕಾಯಿತು. ಆದರೆ ಒಂದು ವರ್ಷ ವ್ಯರ್ಥವಾಗುವುದನ್ನು ತಡೆದಿದ್ದೇವೆ ಎಂಬ ಸಮಾಧಾನ ನಮಗಿದೆ ಎಂದು ಈ ವಿದ್ಯಾರ್ಥಿಗಳು ಹೇಳಿದ್ದಾರೆ.
ಉತ್ತರಾಖಂಡ ಮುಕ್ತ ವಿಶ್ವವಿದ್ಯಾಲಯದ ಬಿ.ಇಡಿ ಪರೀಕ್ಷೆ ಬುಧವಾರ ನಡೆಯಬೇಕಿತ್ತು. ಇದಕ್ಕಾಗಿ ರಾಜಸ್ಥಾನದ ಬಲೋತ್ರಾ ನಿವಾಸಿಗಳಾದ ಒಮರಮ್ ಜಾಟ್, ಮಗರಂ ಜಾಟ್, ಪ್ರಕಾಶ್ ಗೋದಾರ ಜಾಟ್ ಮತ್ತು ನರಪತ್ ಕುಮಾರ್ ಪರೀಕ್ಷಾ ಕೇಂದ್ರವಾದ ಮುನ್ಸಾರಿ ಮಹಾವಿದ್ಯಾಲಯಕ್ಕೆ ತಲುಪಬೇಕಾಗಿತ್ತು. ಎರಡು ದಿನಗಳ ಹಿಂದೆ ಅವರು ಹಲ್‌ದ್ವಾನಿ ತಲುಪಿದಾಗ ಭೂಕುಸಿತದ ನಂತರ ಅನೇಕ ಸ್ಥಳಗಳಲ್ಲಿ ರಸ್ತೆಗಳು ಮುಚ್ಚಲ್ಪಟ್ಟಿವೆ ಎಂದು ತಿಳೀಯಿತು.
ಪರೀಕ್ಷೆ ಬರೆಯದಿದ್ದರೆ ಒಂದು ವರ್ಷ ಕಷ್ಟಪಟ್ಟಿದ್ದೆಲ್ಲಾ ವ್ಯರ್ಥವಾಗುತ್ತದೆ ಎಂದು ಚಿಂತೆಗೊಳಗಾದ ಅವರು ಹಲ್ದ್ವಾನಿ-ಮುನ್ಸಾರಿ ಹೆಲಿಕಾಪ್ಟರ್ ಸೇವೆಯನ್ನು ನಿರ್ವಹಿಸುವ ಕಂಪನಿಯನ್ನು ಸಂಪರ್ಕಿಸಿ ತಮ್ಮ ಪರೀಕ್ಷೆಯ ಬಗ್ಗೆ ತಿಳಿಸಿದರು. ಕಂಪನಿಯ ಸಹಕಾರದೊಂದಿಗೆ ಅವರು ಬುಧವಾರ ಮುನ್ಸಾರಿಗೆ ಬಂದು ಪರೀಕ್ಷೆಗೆ ಹಾಜರಾದರು. ಗುರುವಾರ ನಾಲ್ವರೂ ಹೆಲಿಕಾಪ್ಟರ್ ಮೂಲಕ ಹಲ್‌ದ್ವಾನಿಗೆ ಮರಳಿದರು.