ಹೊಳಲ್ಕೆರೆ : ಸಂವಾದದ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಂಡು ಪರೀಕ್ಷೆ ಭಯ ಹೋಗಲಾಡಿಸಿಕೊಳ್ಳುವಂತೆ ಶಾಸಕ ಡಾ.ಎಂ.ಚಂದ್ರಪ್ಪ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಿದರು.
ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ ಟಾಪ್ ಟೆನ್ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ನಿವಾರಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ
ಇಲಾಖೆ ಸಹಯೋಗದೊಂದಿಗೆ ಪಟ್ಟಣದ ಸಂವಿಧಾನ ಸೌಧದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಸಂವಾದ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು.
ಸಿನಿಮಾ, ನಾಟಕ, ಟಿ.ವಿ.ಧಾರವಾಹಿಗಳನ್ನು ನೋಡಿದ್ದು, ಹೇಗೆ ನಿಮ್ಮ ನೆನಪಿನಲ್ಲಿರುತ್ತದೋ ಅದೇ ರೀತಿ ಪರೀಕ್ಷೆಗಾಗಿ ಪಠ್ಯಪುಸ್ತಕಗಳನ್ನು ಓದಿದ ನೆನಪು ಮನದಲ್ಲಿ ಉಳಿಯಬೇಕಾದರೆ ಏಕಾಗ್ರತೆಯಿರಬೇಕು. ಶಿಕ್ಷಣಕ್ಕಾಗಿ ಸರ್ಕಾರ ಈಗ ಎಲ್ಲಾ ರೀತಿಯ ಅನುಕೂಲಗಳನ್ನು ಕಲ್ಪಿಸಿದೆ. ನಮ್ಮ ಕಾಲದಲ್ಲಿ ಓದುವಾಗ ಸಂವಾದ ಎನ್ನುವುದೆ ಇರಲಿಲ್ಲ. ಹತ್ತನೆ ತರಗತಿ ನಿಮ್ಮ ಜೀವನದ ಪ್ರಮುಖ ತಿರುವು. ಮುಂದೆ ವೈದ್ಯರು, ಇಂಜಿನಿಯರ್, ದೊಡ್ಡ ದೊಡ್ಡ ಅಧಿಕಾರಿಗಳಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದರೆ ಈಗಿನಿಂದಲೆ ಕಠಿಣ ಪರಿಶ್ರಮದಲ್ಲಿ ತೊಡಗಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಸಂವಾದ ಎನ್ನುವುದು ಜ್ಞಾನ ಹೆಚ್ಚಿಸಿಕೊಳ್ಳಲು ಅತ್ಯುತ್ತಮವಾದ ಅವಕಾಶ. ನುರಿತ ಶಿಕ್ಷಕರುಗಳು ಬೋಧಿಸುವ ಪಾಠವನ್ನು ಗಮನ ಕೊಟ್ಟು ಕೇಳಿದಾಗ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಬಹುದು. ಹತ್ತನೆ ತರಗತಿ ಪರೀಕ್ಷೆಯಲ್ಲಿ ೬೨೫ ಕ್ಕೆ ೬೨೫ ಅಂಕಗಳನ್ನು ಪಡೆಯುವ ಪ್ರತಿ ವಿದ್ಯಾರ್ಥಿಗೆ ತಲಾ ಐವತ್ತು ಸಾವಿರ ರೂ.ಗಳ ಬಹುಮಾನ ನೀಡುವುದಾಗಿ ಶಾಸಕ ಡಾ.ಎಂ.ಎಂ.ಚಂದ್ರಪ್ಪ ಘೋಷಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್, ಪುರಸಭೆ ಅಧ್ಯಕ್ಷ ವಿಜಯಸಿಂಹ ಕಾಟ್ರೋತ್, ಉಪಾಧ್ಯಕ್ಷೆ ನಾಗರತ್ನ ವೇದಮೂರ್ತಿ, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಲೋಕೇಶ್, ವೆಂಕಟೇಶ್, ಮೃತ್ಯುಂಜಯ, ಚಂದ್ರಣ್ಣ, ಗೋವಿಂದಪ್ಪ, ಪ್ರಶಾಂತ್, ಮಹಾಲಿಂಗಪ್ಪ, ರವಿಕುಮಾರ್, ಮೋಹನ್, ಸುರೇಂದ್ರನಾಥ್, ವಿಜಯಕುಮಾರ್ ಸೋಮಶೇಖರ್, ಬಸವರಾಜಪ್ಪ ಹಾಗೂ ವಿವಿಧ ಶಾಲೆಗಳ ಶಿಕ್ಷಕರುಗಳು, ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು.