ನವದೆಹಲಿ : ಭಾರತದಲ್ಲಿ ಸರ್ಕಾರಿ ಉದ್ಯೋಗಗಳು ಅತ್ಯಂತ ಭದ್ರ ಹಾಗೂ ಗೌರವಯುತ ವೃತ್ತಿಗಳೆಂದು ಪರಿಗಣಿಸಲಾಗುತ್ತವೆ. ಅದರಲ್ಲೂ ಐಎಎಸ್, ಐಪಿಎಸ್ ಆಗುವ ಕನಸು ಲಕ್ಷಾಂತರ ಯುವಕರದ್ದು. ಆದರೆ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆ ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದ್ದು, ಸಾವಿರಾರು ಆಕಾಂಕ್ಷಿಗಳ ನಡುವೆ ಕೆಲವೇ ಮಂದಿ ಮಾತ್ರ ಯಶಸ್ಸಿನ ಶಿಖರ ತಲುಪುತ್ತಾರೆ. ಅಂಥವರಲ್ಲಿ ಒಬ್ಬರು ಆದಿತ್ಯ ವಿಕ್ರಮ್ ಅಗರ್ವಾಲ್.
ಉತ್ತಮ ಸಂಬಳದ ಕಾರ್ಪೊರೇಟ್ ಉದ್ಯೋಗವನ್ನು ತೊರೆದು ನಾಗರಿಕ ಸೇವೆಯ ಕನಸಿನ ಹಿಂದೆ ಧೈರ್ಯವಾಗಿ ಹೋದ ಆದಿತ್ಯ ವಿಕ್ರಮ್ ಅಗರ್ವಾಲ್, ಯುಪಿಎಸ್‌ಸಿ ಸಿವಿಲ್ ಸರ್ವೀಸ್ ಎಕ್ಸಾಮ್ 2024ರಲ್ಲಿ ಅಖಿಲ ಭಾರತ 9ನೇ ರ್ಯಾಂಕ್ (AIR-9) ಪಡೆದು ದೇಶದಾದ್ಯಂತ ಲಕ್ಷಾಂತರ ಆಕಾಂಕ್ಷಿಗಳಿಗೆ ಸ್ಪೂರ್ತಿಯಾಗಿದ್ದಾರೆ.
ಹರಿಯಾಣದ ಬಹದ್ದೂರ್‌ಗಢದ ಸೆಕ್ಟರ್–2ರಲ್ಲಿ ಬೆಳೆದ ಆದಿತ್ಯ ಬಾಲ್ಯದಿಂದಲೇ ಶೈಕ್ಷಣಿಕವಾಗಿ ಮೆರುಗು ತೋರಿದ್ದರು. 12ನೇ ತರಗತಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಝಜ್ಜರ್ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದ ಅವರು, ನಂತರ ಎನ್ಐಟಿ ಪ್ರಯಾಗರಾಜ್ (ಅಲಹಾಬಾದ್)ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ಪದವಿ ನಂತರ ಟಾಟಾ ಮೋಟಾರ್ಸ್‌ನಲ್ಲಿ ಉದ್ಯೋಗ ಪಡೆದ ಆದಿತ್ಯ, ಕಾರ್ಪೊರೇಟ್ ಕ್ಷೇತ್ರದಲ್ಲಿ ಸ್ಥಿರ ಜೀವನವಿದ್ದರೂ ಐಎಎಸ್ ಆಗಬೇಕೆಂಬ ಆಸೆಯನ್ನು ಕೈಬಿಡಲಿಲ್ಲ.
ಅಂತಿಮವಾಗಿ ತಮ್ಮ ಉದ್ಯೋಗವನ್ನು ತೊರೆದು ಯುಪಿಎಸ್‌ಸಿ ತಯಾರಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡ ಅವರು, ಅನೇಕ ಸವಾಲುಗಳು, ನಿರಾಸೆಗಳು ಮತ್ತು ವಿಫಲ ಪ್ರಯತ್ನಗಳನ್ನು ಎದುರಿಸಿದರು. ಐದು ಪ್ರಯತ್ನಗಳ ನಂತರ ಕೊನೆಗೂ ಅವರು ಯಶಸ್ಸಿನ ಗುರಿ ತಲುಪಿದರು. ಕಠಿಣ ಪರಿಶ್ರಮ, ಶಿಸ್ತುಬದ್ಧ ಅಧ್ಯಯನ ಮತ್ತು ಅಚಲ ಧೈರ್ಯವೇ ತಮ್ಮ ಯಶಸ್ಸಿನ ಮೂಲ ಎಂದು ಆದಿತ್ಯ ಹೇಳುತ್ತಾರೆ.
ಆದಿತ್ಯ ವಿಕ್ರಮ್ ಅಗರ್ವಾಲ್ ಅವರ ಯಶಸ್ಸಿನ ಕಥೆ, ಯುಪಿಎಸ್‌ಸಿ ತಯಾರಿಯಲ್ಲಿ ವಿಫಲತೆಗಳಿಂದ ಬೇಸರಗೊಂಡು ಮಧ್ಯದಲ್ಲೇ ಕೈಬಿಡಲು ಯೋಚಿಸುವ ಅನೇಕ ಆಕಾಂಕ್ಷಿಗಳಿಗೆ ಹೊಸ ಆತ್ಮವಿಶ್ವಾಸ ಮತ್ತು ಪ್ರೇರಣೆಯನ್ನು ನೀಡುತ್ತಿದೆ. “ಒಮ್ಮೆ ಅಲ್ಲ, ಅನೇಕ ಬಾರಿ ಬೀಳಬಹುದು; ಆದರೆ ಕೈಬಿಡದಿದ್ದರೆ ಯಶಸ್ಸು ಖಂಡಿತ ಸಿಗುತ್ತದೆ” ಎಂಬ ಸಂದೇಶವನ್ನು ಅವರ ಜೀವನ ಸ್ಪಷ್ಟವಾಗಿ ಸಾರುತ್ತದೆ.

































