ಉತ್ತರ ಪ್ರದೇಶ : ಯುಪಿಎಸ್ಸಿ ಪರೀಕ್ಷೆಯು ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಪ್ರಯತ್ನಿಸುತ್ತಾರೆ, ಆದರೆ ಕೆಲವೇ ಕೆಲವರು ತಮ್ಮ ಕನಸನ್ನು ನನಸಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಹೀಗೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾದ ಮೊಯಿನ್ ಅಹಮದ್ ಅವರ ಕಥನ ಇದು.
ಮೊರಾದಾಬಾದ್ ಜಿಲ್ಲೆಯ ಜತ್ಪುರ ಎಂಬ ಸಣ್ಣ ಹಳ್ಳಿಯಿಂದ ಬಂದ ಮೊಯಿನ್ ಅಹಮದ್, ಸಾಮಾನ್ಯ ಕುಟುಂಬದಲ್ಲಿ ಬೆಳೆದರೂ ಅಸಾಧಾರಣ ಕನಸುಗಳನ್ನು ಹೊತ್ತ ಯುವಕ. ಯುಪಿ ರೋಡ್ವೇಸ್ನಲ್ಲಿ ಬಸ್ ಚಾಲಕರಾದ ವಾಲಿ ಹಸನ್ ಮತ್ತು ಗೃಹಿಣಿಯಾದ ತಸ್ಲೀಮ್ ಜಹಾನ್ ದಂಪತಿ ಮಗನಾದ ಮೊಯಿನ್, ಬಾಲ್ಯದಲ್ಲಿ ಕ್ರಿಕೆಟ್ ಆಟಗಾರನಾಗುವ ಕನಸು ಕಂಡಿದ್ದರು. ಆದರೆ ಮನೆಯ ಆರ್ಥಿಕ ಪರಿಸ್ಥಿತಿ ಅವನ ಕ್ರೀಡಾ ಕನಸುಗಳನ್ನು ನೆರವೇರಿಸುವಷ್ಟು ಸೌಲಭ್ಯ ಒದಗಿಸಲಿಲ್ಲ. ಕುಟುಂಬದ ಜವಾಬ್ದಾರಿಯಿಂದಾಗಿ ಮೊಯಿನ್ ಸೈಬರ್ ಕೆಫೆಯಲ್ಲಿ ಕೆಲಸ ಪ್ರಾರಂಭಿಸಿದಾಗಲೇ ಅವನ ಜೀವನ ಅಪ್ರತೀಕ್ಷಿತ ತಿರುವು ಪಡೆಯಿತು.
ಅಲ್ಲಿದ್ದಾಗ ಯುಪಿಎಸ್ಸಿ ಪರೀಕ್ಷೆಯ ಕುರಿತು ತಿಳಿದುಕೊಂಡ ಅವರು, ತನ್ನ ಭವಿಷ್ಯವನ್ನು ಸಂಪೂರ್ಣವಾಗಿ ಬದಲಾಯಿಸಬಹುದಾದ ಮಾರ್ಗವನ್ನು ಕಂಡುಹಿಡಿದರು. ಕ್ರಮೇಣ ಅವನ ಗಮನ ಸರ್ಕಾರಿ ಸೇವೆ ಮತ್ತು ಅಧ್ಯಯನದ ಕಡೆಗೆ ತಿರುಗಿತು. ಈ ಕನಸಿಗಾಗಿ ಕೆಫೆಯ ಉದ್ಯೋಗವನ್ನೇ ತ್ಯಜಿಸಿದ ಅವನ ನಿರ್ಧಾರವನ್ನು ಕುಟುಂಬದ ಎಲ್ಲಾ ಸದಸ್ಯರು ಬೆಂಬಲಿಸದಿದ್ದರೂ, ತಾಯಿ ತಸ್ಲೀಮ್ ಜಹಾನ್ ಮಾತ್ರ ಅವರಿಗೆ ಬಲವಾಗಿ ನಿಂತು ಆತ್ಮವಿಶ್ವಾಸ ತುಂಬಿದರು.
2019ರಲ್ಲಿ ಯುಪಿಎಸ್ಸಿ ತಯಾರಿಗಾಗಿ ಮೊಯಿನ್ ದೆಹಲಿಗೆ ತೆರಳಿದರು. ಅಲ್ಲಿನ ಜೀವನೋಪಾಯ ವೆಚ್ಚ ಮತ್ತು ತರಬೇತಿ ಶುಲ್ಕಕ್ಕಾಗಿ ಅವರು ರೂ. 2.5 ಲಕ್ಷ ಸಾಲ ಪಡೆದುಕೊಂಡರು. ಸವಾಲಿನ ದಿನಗಳು, ಅಸಮಾಧಾನ, ವಿಫಲತೆ-ಇವೆಲ್ಲವನ್ನು ಎದುರಿಸಿದರೂ ಅವರು ಹಿಂದೆ ಸರಿಯಲಿಲ್ಲ. ಮೊದಲ ಮೂರು ಪ್ರಯತ್ನಗಳಲ್ಲಿ ಯುಪಿಎಸ್ಸಿ ಪ್ರಿಲಿಮ್ಸ್ ಮತ್ತು ಮೇನ್ಸ್ ಅನ್ನು ತೇರ್ಗಡೆ ಮಾಡಲಾರದಿದ್ದರೂ, ಪ್ರತಿ ವೈಫಲ್ಯವನ್ನು ಪಾಠವಾಗಿ ಪರಿಗಣಿಸಿ ಮತ್ತಷ್ಟು ಗಟ್ಟಿ ಅಭ್ಯಾಸ ಆರಂಭಿಸಿದರು. ಕೊನೆಗೂ ನಾಲ್ಕನೇ ಪ್ರಯತ್ನದಲ್ಲಿ ತಮ್ಮ ಪರಿಶ್ರಮಕ್ಕೆ ಫಲ ಸಿಕ್ಕಿತು. ಯುಪಿಎಸ್ಸಿ 2022ರಲ್ಲಿ 296ನೇ ರ್ಯಾಂಕ್ ಗಳಿಸಿದ ಅವರು, ಪಶ್ಚಿಮ ಬಂಗಾಳ ಕೇಡರ್ನ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದರು.
ಸೈಬರ್ ಕೆಫೆ ಉದ್ಯೋಗಿಯಿಂದ ದೇಶದ ಅತ್ಯುನ್ನತ ಸೇವೆಗಳಲ್ಲೊಂದಾದ ಐಎಎಸ್ ಹುದ್ದೆಯವರೆಗೆ ಬಂದಿರುವ ಮೊಯಿನ್ ಅಹಮದ್ ಅವರ ಬದುಕು, ಸಾಮಾನ್ಯ ಪರಿಸ್ಥಿತಿ ಎಂದರೆ ಕನಸುಗಳು ಅಸಾಧ್ಯವಲ್ಲ ಎಂಬುದಕ್ಕೆ ಜೀವಂತ ಉದಾಹರಣೆ. ಸವಾಲಿನ ಸಂದರ್ಭದಲ್ಲಿ ಹೋರಾಡುವ ಧೈರ್ಯ, ತಾಯಿಯ ನಂಬಿಕೆ ಮತ್ತು ನಿರಂತರ ಪರಿಶ್ರಮವೇ ಅವರನ್ನು ಈ ಮಟ್ಟಕ್ಕೆ ತಂದಿದೆ. ಇಂದು ತಮ್ಮ ಹಿನ್ನೆಲೆಯಿಂದ ಮೇಲೇಳಲು ಬಯಸುವ ಸಾವಿರಾರು ಯುವಕರಿಗೆ ಮೊಯಿನ್ ಅಹಮದ್ ಪ್ರೇರಣೆಯ ಪ್ರತಿರೂಪವಾಗಿದ್ದಾರೆ.
































