ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ಫಾಜಿಲ್ ಸಹೋದರ ಸುಪಾರಿ ನೀಡಿದ್ದ ವಿಚಾರ ಬಹಿರಂಗವಾಗಿತ್ತು. ಆದರೆ, ಇದೀಗ ವಿದೇಶದಿಂದಲೂ ಹಣ ಕಳುಹಿಸಲಾಗಿತ್ತೇ ಎಂಬ ಅನುಮಾನ ವ್ಯಕ್ತವಾಗಿದೆ.
ಆ ನಿಟ್ಟಿನಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸುಹಾಸ್ ಶೆಟ್ಟಿ ಹತ್ಯೆ ಹಿಂದೆ ಅನೇಕ ಕಾಣದ ಕೈಗಳ ಕೈವಾಡ ಶಂಕೆ ವ್ಯಕ್ತವಾಗಿದ್ದು, ವಿವಿಧ ಬ್ಯಾಂಕ್ ಖಾತೆಗಳ ಪರಿಶೀಲನೆಗೆ ಪೊಲೀಸರು ಮುಂದಾಗಿದ್ದಾರೆ.
ಸುಹಾಸ್ ಶೆಟ್ಟಿ ಹತ್ಯೆಗೂ ಮುನ್ನ ಹಂತಕರ ತಂಡ ಭರ್ಜರಿ ಪಾರ್ಟಿ ಮಾಡಿತ್ತೇ ಎಂಬ ಅನುಮಾನ ಕೂಡ ವ್ಯಕ್ತವಾಗಿದೆ.ಸುಹಾಸ್ ಶೆಟ್ಟಿಯನ್ನು ಕೊಲ್ಲಬೇಕೆಂಬ ಉದ್ದೇಶದಿಂದ ಹಂತಕರ ತಂಡವು ನಾಲ್ಕು ತಿಂಗಳ ಹಿಂದೆ, ಜನವರಿಯಲ್ಲೇ ಈ ಕುರಿತಂತೆ ಚಟುವಟಿಕೆ ಆರಂಭಿಸಿತ್ತು.
ಬಂಧಿತ ಆರೋಪಿ ಸಫ್ವಾನ್ ಹತ್ಯೆಗೆ ಸಹಾಯ ಮಾಡುವಂತೆ ಅನೇಕರನ್ನು ಸಂಪರ್ಕಿಸಿದ್ದಾನೆ. ಅಲ್ಲದೆ, ಮುಜಾಮಿಲ್ ಮೂಲಕ ವಿದೇಶದಲ್ಲಿರುವ ಕೆಲವರಿಂದ ಹಣಕಾಸು ನೆರವು ಪಡೆದಿದ್ದ ಶಂಕೆಯಿದೆ. ಹೀಗಾಗಿ ಹಿಂದೂ ಕಾರ್ಯಕರ್ತನ ಹತ್ಯೆಗೆ ವಿದೇಶದಿಂದಲೂ ಹಣ ಹರಿದು ಬಂದಿದೆ ಎಂಬ ಶಂಕೆ ತನಿಖಾಧಿಕಾರಿಗಳಿಗೆ ಬಲವಾಗಿ ಮೂಡಿದೆ.
ಹತ್ಯೆಯಾದ ನಂತರ ಕೂಡಲೇ ಸರೆಂಡರ್ ಆಗುವ ಕುರಿತು ತಂಡದಲ್ಲಿ ಚರ್ಚೆ ನಡೆದಿದ್ದು, ಈ ಸಂಪೂರ್ಣ ಕೃತ್ಯಕ್ಕೆ ಬೇಕಾದ ವಾಹನಗಳು ಪಿಕ್ ಅಪ್ ಮತ್ತು ಸ್ವಿಫ್ಟ್ ಕಾರು ಕೂಡ ತಯಾರಾಗಿದ್ದವು. ಸುಹಾಸ್ ಶೆಟ್ಟಿ ತಪ್ಪಿಸಿಕೊಂಡರೆ ಏನು ಮಾಡಬೇಕು ಎಂಬುದಕ್ಕೂ ‘ಪ್ಲಾನ್ ಬಿ’ ಸಿದ್ಧವಾಗಿತ್ತು. ಜನವರಿಯಲ್ಲೇ ಸಫ್ವಾನ್ನ ತಂಡಕ್ಕೆ ಫಾಜಿಲ್ ತಮ್ಮ ಆದಿಲ್ ಎಂಬವರು ₹3 ಲಕ್ಷ ಹಣ ನೀಡಿದ್ದ ಎನ್ನಲಾಗಿದೆ.
ಹಂತಕರಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನೂ ಕಾಣದ ಕೈಗಳ ಗುಂಪು ಮಾಡಿತ್ತಾ ? ಈ ಹ*ತ್ಯೆಯ ಹಿಂದೆ 30ಕ್ಕೂ ಹೆಚ್ಚು ಮಂದಿ ಭಾಗಿಯಾಗಿರುವ ಸಾಧ್ಯತೆಯಿದೆ ಹೀಗಾಗಿ ಪೋಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಪ್ರಕರಣದ ಎಲ್ಲ ಆಯಾಮಗಳನ್ನು ಶೋಧಿಸುತ್ತಿದೆ.