ಬೆಂಗಳೂರು: ನಿನ್ನೆಯಿಂದೀಚೆಗೆ ಗಳಿಗೆಗೊಂದು ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿರುವ ಸುಜಾತ ಭಟ್‌ಗೆ ಪೊಲೀಸ್ ರಕ್ಷಣೆ ನೀಡಲಾಗಿದೆ. ನನಗೆ ಆರೋಗ್ಯ ಸರಿಯಿಲ್ಲ, ಬೆದರಿಕೆ ಇದೆ. ನನಗೆ ರಕ್ಷಣೆ ಕೊಡಿ ಎಂದು ಸ್ಥಳೀಯ ಪೊಲೀಸರಿಗೆ ಸುಜಾತ ಭಟ್ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಪೊಲೀಸರು ಸುಜಾತ ಭಟ್ ಇರುವ ಮನೆಗೆ ಭದ್ರತೆ ಒದಗಿಸಿದ್ದಾರೆ. ಬ್ಯಾರಿಕೇಡ್ ಹಾಕಿ ಹದಿನೈದಕ್ಕೂ ಹೆಚ್ಚು ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.
ಸುಜಾತ ಭಟ್ ಮನವಿ ಹಿನ್ನೆಲೆಯಲ್ಲಿ ಬೆಂಗಳೂರಿನ ಬನಶಂಕರಿ ಪೊಲೀಸರು ಸುಜಾತ ಭಟ್‌ಗೆ ಭದ್ರತೆ ನೀಡಿದ್ದಾರೆ. ಮನೆಯ ಬಳಿ ಮಾಧ್ಯಮದವರು, ಸಾರ್ವಜನಿಕರು ಬರದಂತೆ ನಿರ್ಬಂಧ ಹೇರಲಾಗಿದೆ. ಯಾರೂ ಮನೆಯ ಹತ್ತಿರ ಬರದಂತೆ ನೋಡಿಕೊಳ್ಳಿ ಎಂದು ಸುಜಾತ ಭಟ್ ಪೊಲೀಸರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆ ಶಿಫ್ಟ್ ಲೆಕ್ಕದಲ್ಲಿ ಪೊಲೀಸರು ಸುಜಾತ ಭಟ್‌ಗೆ ಭದ್ರತೆ ನೀಡುತ್ತಿದ್ದಾರೆ.
ಅನನ್ಯಾ ಭಟ್ ನಾಪತ್ತೆ ಪ್ರಕರಣ ಸಂಬಂಧ ಸುಜಾತ ಭಟ್ ಮನೆಗೆ ಎಸ್‌ಐಟಿ ಅಧಿಕಾರಿಗಳು ಆಗಮಿಸುವ ಸಾಧ್ಯತೆಯಿದೆ. ವಿಚಾರಣೆಗೆ ಹಾಜರಾಗುವಂತೆ ಬಿಎನ್‌ಎಸ್ 131 ಸೆಕ್ಷನ್‌ನಡಿ ಸುಜಾತ ಭಟ್‌ಗೆ ಎಸ್‌ಐಟಿ ನೋಟಿಸ್ ನೀಡಿತ್ತು. ಆದರೆ ಸುಜಾತ ಭಟ್ ವಿಚಾರಣೆಗೆ ಹಾಜರಾಗದೆ ಆರೋಗ್ಯದ ಕಾರಣ ನೀಡಿದ್ದರು. ಸೆಕ್ಷನ್ ಬಿಎನ್‌ಎಸ್ 180 ಅಡಿ ಸುಜಾತ ಭಟ್ ಹೇಳಿಕೆ ದಾಖಲಿಸಲು ಅವಕಾಶವಿದೆ.
ಎಸ್‌ಐಟಿ ಅಧಿಕಾರಿಗಳು ವಿಡಿಯೋ ರೆಕಾರ್ಡ್‌ನಲ್ಲಿ ಸುಜಾತ ಭಟ್ ಹೇಳಿಕೆ ದಾಖಲಿಸಲಿದ್ದಾರೆ. ಬಿಎನ್‌ಎಸ್ ಕಾಯ್ದೆ ಪ್ರಕಾರ ದೂರುದಾರರು ಅಥವಾ ಸಾಕ್ಷಿದಾರರು 60 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ ಅಥವಾ 18 ವರ್ಷದ ಒಳಗಿನವರಾಗಿದ್ದರೆ ತನಿಖಾ ತಂಡ ದೂರುದಾರ/ಸಾಕ್ಷಿದಾರರ ನಿವಾಸಕ್ಕೆ ತೆರಳಿ ಹೇಳಿಕೆ ದಾಖಲಿಸಬಹುದು. ಅನನ್ಯಾ ಭಟ್ ನಾಪತ್ತೆ ಪ್ರಕರಣದ ತನಿಖೆ ನಡೆಸ್ತಿರುವ ಎಸ್‌ಐಟಿ ಅಧಿಕಾರಿಗಳು ಸುಜಾತ ಭಟ್ ಮನೆಗೆ ತೆರಳಿ ಹೇಳಿಕೆ ದಾಖಲಿಸುವ ಸಾಧ್ಯತೆಯಿದೆ.