ಬೆಂಗಳೂರು: ಧರ್ಮಸ್ಥಳದಲ್ಲಿ ಸಾಕಷ್ಟು ಶವಗಳನ್ನು ಹೂತಿರುವ ಪ್ರಕರಣಕ್ಕೆ ಸಂಬಂದಿಸಿದಂತೆ ನಿಖೆ ನಡೆಯುತ್ತಿರುವಾಗಲೇ ನನ್ನ ಮಗಳು ಅನನ್ಯಾ ಭಟ್ ಸಹ 2003ರಲ್ಲಿ ಧರ್ಮಸ್ಥಳಕ್ಕೆ ಬಂದು ಕಾಣೆಯಾಗಿದ್ದಾಳೆ ಎಂದು ಸುಜಾತಾ ಭಟ್ ಎಂಬುವವರು ಹೇಳಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ಆಗಿದೆ. ಅನನ್ಯಾ ಭಟ್ ಎಂಬ ಅಸ್ತಿತ್ವವೇ ಇಲ್ಲ ಎಂಬುದನ್ನು ಸ್ವತಃ ಸುಜಾತಾ ಭಟ್ ಸತ್ಯ ಹೇಳಿದ್ದಾರೆ. ಕರ್ನಾಟಕದ ಜನರ ಮುಂದೆ ಧರ್ಮಸ್ಥಳ ವಿರುದ್ಧ ಯಾಕೆ ಈ ರೀತಿ ಸುಳ್ಳು ಹೇಳಿದ್ದೆ ಎಂಬುದನ್ನು ಅವರು ವಿವರಿಸಿ ತಪ್ಪೊಪ್ಪಿಕೊಂಡಿದ್ದಾರೆ. ಆದರೆ ಇದೀಗ ಮಾಧ್ಯಮಗಳ ಕಿರುಕುಳದಿಂದ ನೊಂದಿದ್ದೇನೆ ಎಂದು ಹೇಳಿಕೊಂಡು ಸುಜಾತ ಭಟ್ ಡೆತ್ ನೋಟ್ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾಧ್ಯಮಗಳ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದೇ ವೇಳೆ, ಸುಜಾತ ಭಟ್ ಅವರು ಮತ್ತೊಂದು ನಾಟಕೀಯ ಬೆಳವಣಿಗೆಯಂತೆ ಪೊಲೀಸರಿಂದ ಭದ್ರತೆ ಕೋರಿದ್ದಾರೆ. ತಮ್ಮ ಆರೋಗ್ಯ ಸರಿಯಿಲ್ಲ ಮತ್ತು ಬೆದರಿಕೆಗಳು ಬರುತ್ತಿವೆ ಎಂದು ಹೇಳಿ ಸ್ಥಳೀಯ ಪೊಲೀಸರಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಬನಶಂಕರಿ ಪೊಲೀಸರು ಸುಜಾತ ಭಟ್ ಅವರಿಗೆ ಭದ್ರತೆ ಒದಗಿಸಿದ್ದು, ಅವರ ಮನೆಯ ಬಳಿ ಯಾರೊಬ್ಬರೂ ಮಾಧ್ಯಮದವರು ಅಥವಾ ಸಾರ್ವಜನಿಕರು ಬರದಂತೆ ನಿರ್ಬಂಧ ಹೇರಿದ್ದಾರೆ. ಸದ್ಯ ಪೊಲೀಸರು ಪತ್ರದ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ