ನವದೆಹಲಿ :ಉನ್ನಾವೊದ ಸುಮೇಧಾ ಮಿಶ್ರಾ ತಮ್ಮ ಮೊದಲ ಪ್ರಯತ್ನದಲ್ಲೇ 253ನೇ ರ‍್ಯಾಂಕ್ ಪಡೆದು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಸುಮೇಧಾ ಮಿಶ್ರಾ ಸಾಧನೆಯು ಪರಿಶ್ರಮ, ಶಿಸ್ತು ಮತ್ತು ಪರಿಶ್ರಮಕ್ಕೆ ಸಾಕ್ಷಿಯಾಗಿದೆ.
ಕೇಂದ್ರ ಲೋಕಸೇವಾ ಆಯೋಗ (UPSC) ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆ (CSE) 2024ರ ಫಲಿತಾಂಶ ಪಟ್ಟಿಯಲ್ಲಿ 253ನೇ ರ‍್ಯಾಂಕ್ ಪಡೆದು ಸುಮೇಧಾ ಮಿಶ್ರಾ ಪಾಸ್ ಆಗಿದ್ದಾರೆ. ಆ ವರ್ಷ ಶಕ್ತಿ ದುಬೆ ಮೊದಲ ರ‍್ಯಾಂಕ್ ಗಳಿಸಿದ್ದರು ಮತ್ತು ಹರ್ಷಿತಾ ಗೋಯಲ್ ಮತ್ತು ಡೊಂಗ್ರೆ ಅರ್ಚಿತ್ ಪರಾಗ್ ಮುಂದಿನ ಎರಡು ರ‍್ಯಾಂಕ್ ಗಳಿಸಿದ್ದರು.
ಉನ್ನಾವೊದ ಅಸೋಹಾದ ಅಜಯ್‌ಪುರ ಗ್ರಾಮದ ನಿವಾಸಿಯಾದ ಸುಮೇಧಾ, ದೆಹಲಿಯ ಸರ್ಕಾರಿ ಪ್ರತಿಭಾ ಅಭಿವೃದ್ಧಿ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ ಅವರು 2020ರಲ್ಲಿ ದೆಹಲಿ ವಿಶ್ವವಿದ್ಯಾಲಯದ ಕಿರೋರಿಮಲ್ ಕಾಲೇಜಿನಿಂದ ಭೂಗೋಳಶಾಸ್ತ್ರದಲ್ಲಿ ಗೌರವ ಪದವಿ ಪಡೆದರು. ಅವರ ತಂದೆ ರಾಘವೇಂದ್ರ ಮಿಶ್ರಾ ದೆಹಲಿಯ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು, ತಾಯಿ ರೇಣು ಮಿಶ್ರಾ ಗೃಹಿಣಿ.
ಸುಮೇಧಾ ಅಕ್ಕ ಸೌಮ್ಯ ಮಿಶ್ರಾ 2021ರಲ್ಲಿ ಯುಪಿಪಿಎಸ್‌ಸಿ (ಉತ್ತರ ಪ್ರದೇಶ ಸಾರ್ವಜನಿಕ ಸೇವಾ ಆಯೋಗ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು ಮತ್ತು ಎಸ್‌ಡಿಎಂ ಹುದ್ದೆಗೆ ಆಯ್ಕೆಯಾದರು. ಈ ಹುದ್ದೆಯ ಜೊತೆಗೆ ಈಕೆ ಕೂಡ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು.
ಅಕ್ಕ-ತಂಗಿ ಇಬ್ಬರೂ ಒಂದೇ ವರ್ಷ ಯುಪಿಎಸ್‌ಸಿ ಪರೀಕ್ಷೆ ಬರೆದು ಪಾಸ್ ಆಗಿದ್ದಾರೆ. ಸೌಮ್ಯಾ 18ನೇ ರ‍್ಯಾಂಕ್ ಮತ್ತು ಸುಮೆಧಾ 253ನೇ ರ‍್ಯಾಂಕ್ ಪಡೆದಿದ್ದಾರೆ. ಅಕ್ಕನ ದಾರಿಯನ್ನೇ ಅನುಸರಿಸಿದ ಇವರು, ಅಕ್ಕನಂತೆಯೇ ಓದಿ ಯುಪಿಎಸ್‌ಸಿ ಪರೀಕ್ಷೆಯನ್ನು ಪಾಸ್ ಮಾಡಿದ್ದಾರೆ.
ಸುಮೇಧಾ ಅವರ ಸಾಧನೆಯು ಅವರ ವೈಯಕ್ತಿಕ ದೃಢನಿಶ್ಚಯವನ್ನು ಪ್ರತಿಬಿಂಬಿಸುವುದಲ್ಲದೆ, ಸ್ಥಿರತೆ ಮತ್ತು ಸಿದ್ಧತೆ, ಶ್ರಮ ಇದ್ದರೆ ಗುರಿ ಮುಟ್ಟಲು ಸಾಧ್ಯ ಎಂಬುವುದನ್ನು ಸಾಬೀತು ಮಾಡಿದ್ದಾರೆ.
































