ಇತ್ತೀಚಿನ ದಿನದಲ್ಲಿ ವಾತಾವರಣದ ತಾಪಮಾನ ಏರುತ್ತಲೇ ಇದ್ದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಒಂದು ಕಡೆ ಅಲರ್ಜಿ ಇತರ ಚರ್ಮ ರೋಗದ ಸಮಸ್ಯೆ ಕಾಡುತ್ತಿದ್ದರೆ ಇನ್ನೊಂದೆಡೆ ಬಾಯಾರಿಕೆಯಿಂದ ಸುಸ್ತು, ಉಸಿರಾಟದ ಸಮಸ್ಯೆ, ಅಸ್ವಸ್ಥತೆ ಇತರ ಆರೋಗ್ಯ ಸಮಸ್ಯೆಯು ಕಾಡುತ್ತಿದೆ. ಈಗಾಗಲೇ ದೇಶಾದ್ಯಂತ ತಾಪ ಮಾನದ ಬಿಸಿ ಏರಿಕೆಯಾಗಿದ್ದು ಮುಂಬೈ ನಲ್ಲಿ ಈ ಬಾರಿ ಹತ್ತು ವರ್ಷ ಗಳಲ್ಲೇ ಅತೀ ಹೆಚ್ಚು 39.7 ಡಿಗ್ರಿ ತಾಪಮಾನ ದಾಖಲಾಗಿದೆ. ಇನ್ನು ರಾಜಸ್ಥಾನದಲ್ಲಿ 50ಡಿಗ್ರಿ ತಾಪಮಾನ ಏರಿಕೆಯಾಗಿದೆ. ಎಪ್ರಿಲ್ ಮೇ ನಲ್ಲಿ ಈ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇರಲಿದೆ. ಆದ್ದರಿಂದ ಈಗಲೇ ಬೇಸಿಗೆಯ ತಾಪಮಾನ ಸಮಸ್ಯೆ ಬಗ್ಗೆ ಎಚ್ಚೆತ್ತುಕೊಂಡು ಪರಿಹಾರ ಕಂಡುಕೊಳ್ಳಬೇಕಿದೆ. ಹಾಗಾಗಿ ಈ ಸುಡು ಬೇಸಿಗೆಯ ಬಿಸಿ ಶಾಖದಿಂದ ನಿಮ್ಮ ದೇಹವನ್ನು ರಕ್ಷಿಸಿ ಕೊಳ್ಳಲು ಕೆಲವು ಸಿಂಪಲ್ ಟಿಪ್ಸ್ ಅಳವಡಿಸಿಕೊಳ್ಳಬೇಕು. ಹಾಗಾದರೆ ದೇಹದ ಆರೋಗ್ಯ ದೃಷ್ಟಿಯಿಂದ ಯಾವೆಲ್ಲ ವಿಧಾನ ಅನುಸರಿಸಿದರೆ ಬೇಸಿಗೆಯ ತಾಪಮಾನ ತಡೆದಿಟ್ಟುಕೊಳ್ಳಬಹುದು ಎಂಬ ಬಗ್ಗೆ ಕೆಲವು ಆಸಕ್ತಿದಾಯಕ ಮಾಹಿತಿ ಇಲ್ಲಿದೆ.
ಸಡಿಲವಾದ ಬಟ್ಟೆ ಧರಿಸಿ:
ಬೇಸಿಗೆ ಎಂದಾಗ ಸೆಕೆ ಪ್ರಮಾಣ ಅಧಿಕ ಇರುವುದು ಸಹಜ. ಇಂತಹ ಸಂದರ್ಭಗಳಲ್ಲಿ ಹೆಚ್ಚು ಫಿಟ್ ಇರುವ ಬಟ್ಟೆ ಧರಿಸಿದರೆ ಕಿರಿಕಿರಿ ಅನುಭವ ಆಗುವ ಸಾಧ್ಯತೆ ಇದೆ. ಅಲ್ಲದೆ ಮೈ ಮೇಲಿನ ಬಟ್ಟೆ ಬಹಳ ಫಿಟ್ ಇದ್ದರೆ ಬೆವರು ಮೈಯಲ್ಲೆ ಅಂಟಿ ಅಲರ್ಜಿ, ಗುಳ್ಳೆ ಇತರ ಚರ್ಮ ಸಮಸ್ಯೆ ಬರಲಿದೆ. ಹಾಗಾಗಿ ತೆಳ್ಳಗಿನ ಬೇಸಿಗೆ ಕಾಲದ ಬಟ್ಟೆಗಳನ್ನೇ ಧರಿಸಿರಿ.
ಛತ್ರಿ ಟೊಪ್ಪಿ ಬಳಸಿ:
ಬಿಸಿಲಿನಲ್ಲಿ ಪ್ರಯಾಣ ಮಾಡಬೇಕಾದ ಸಂದರ್ಭ ಬಂದಾಗ ಬಿಸಿಲಿನಲ್ಲಿ ಸುತ್ತಾಡುವ ಮುನ್ನ ಕೊಡೆ, ಟೊಪ್ಪಿ, ಸನ್ ಗ್ಲಾಸ್ ಇತರ ವಸ್ತುಗಳನ್ನು ನಿಮ್ಮ ಜೊತೆಗೆ ಕೊಂಡೊಯ್ಯುವುದನ್ನು ನೀವು ಮರೆಯದಿರಿ. ಹೊರಗೆ ಬಿಸಿಲಿನ ಸಂದರ್ಭದಲ್ಲಿ ಅಂದರೆ ಮಧ್ಯಾಹ್ನದ ಹೊತ್ತು ಹೋಗುವುದನ್ನು ಆದಷ್ಟು ತಪ್ಪಿಸಿ. ಬೆಳಗ್ಗೆ 11.30 ರಿಂದ ಸಂಜೆ 4ರ ತನಕ ಹೆಚ್ಚು ಪ್ರಯಾಣ ಮಾಡದಿದ್ದರೆ ಒಳಿತು.
ನಿದ್ರಾ ಹೀನತೆ:
ಬೇಸಿಗೆ ಕಾಲಕ್ಕೆ ಬಿಸಿಯ ಹಬೆಗೆ ನಿದ್ದೆ ಬರುತ್ತಿಲ್ಲ ಎಂದು ದೂರುವವರು ಅನೇಕರಿದ್ದಾರೆ. ಫ್ಯಾನ್ ಹಾಕುವಾಗಲು ಒಳಗಿನ ಬಿಸಿಯ ತಾಪಮಾನ ಹೊರಗೆ ಹೋಗಲು ಕಿಟಕಿ ತೆಗೆದಿಡುವುದು ಒಂದು ಒಳ್ಳೆಯ ಕ್ರಮ ಎನ್ನ ಬಹುದು. ದೇಹಕ್ಕೆ ಬೇಕಾಗುವಷ್ಟು ವಿಶ್ರಾಂತಿ ನೀಡುವ ವಿಚಾರದಲ್ಕಿ ಯಾವುದೇ ರಾಜಿ ಮಾಡಿಕೊಳ್ಳಬೇಡಿ. ಸರಿಯಾದ ಸಮಯಕ್ಕೆ ನಿದ್ರಿಸುವ ಹವ್ಯಾಸ ಬೆಳೆಸಿಕೊಳ್ಳಬೇಕು.
ದ್ರವ ಆಹಾರಗಳನ್ನು ಅಧಿಕ ಸೇವಿಸಿ
ನೀರನ್ನು ಹೆಚ್ಚು ಸೇವಿಸುವುದನ್ನು ಮರೆಯದಿರಿ. ಅದರ ಜೊತೆಗೆ ದ್ರವ ಆಹಾರಗಳನ್ನು ಅತೀ ಹೆಚ್ಚು ಸೇವಿಸಿ.ಕಲ್ಲಂಗಡಿ ಹಣ್ಣು, ಎಳನೀರು, ದ್ರಾಕ್ಷಿ ಇತರ ಹಣ್ಣಿನ ಸೇವನೆ, ಕಾಳಿನಿಂದ ಮಾಡುವ ಜ್ಯೂಸ್ ಗಳಾದ ಎಳ್ಳು ಜ್ಯೂಸ್, ಕೋಕಂ ಜ್ಯೂಸ್ ಇತರ ಸೇವನೆ ಮಾಡಬೇಕು. ಹೆಸರು, ಕಡಲೆ ಇತರ ಕಾಳನ್ನು ರಾತ್ರಿ ನೆನೆ ಹಾಕಿ ಹಗಲು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಸಹ ಅನೇಕ ಆರೋಗ್ಯ ಪ್ರಯೋಜನೆ ಸಿಗಲಿದೆ. ದೇಹದಲ್ಲಿ ನೀರಿನ ಅಂಶ ಉಳಿಸಿಕೊಂಡಾಗ ದೇಹ ಹೆಚ್ಚು ತಂಪಾಗಿ ಇರಲಿದೆ. ಡೀಪ್ ಫ್ರೈ, ಸಕ್ಕರೆ , ಡೈರಿ ಆಹಾರಗಳನ್ನು ಕಡಿಮೆ ಸೇವಿಸಿ ಹಣ್ಣು ತರಕಾರಿ ಅತೀ ಹೆಚ್ಚು ಸೇವಿಸಿದರೆ ದೇಹದ ಆರೋಗ್ಯದ ಮೇಲೆ ಬಿಸಿಲಿನ ತಾಪಮಾನ ಋಣಾತ್ಮಕ ಪರಿಣಾಮ ಬೀರಲಾರದು.
ಹಸಿ ತರಕಾರಿ ಸೇವಿಸಿ:
ಹಣ್ಣು ಸೇವನೆ ಜೊತೆಗೆ ಹಸಿ ಸೌತೆ ಕಾಯಿ, ಕ್ಯಾರೆಟ್ ಇತರವುಗಳನ್ನು ಸೇವಿಸಿದರೆ ನಿರ್ಜಲೀಕರಣ ಸಮಸ್ಯೆ ಬರಲಾರದು. ಅಂಗಡಿಯ ಕೂಲ್ ಡ್ರಿಂಕ್ ನಿಂದ ಆದಷ್ಟು ದೂರವಿದ್ದು ಕೆಮಿಕಲ್ ಮುಕ್ತ ನೈಸರ್ಗಿಕ ಹಣ್ಣು ತರಕಾರಿ ಸೇವಿಸಬೇಕು. ಲಿಂಬು ಜ್ಯೂಸ್, ಪುದೀನ ಜ್ಯೂಸ್ ಇತರವುಗಳು ಬೇಸಿಗೆ ತಾಪಮಾನ ಹಿಡಿದಿಟ್ಟುಕೊಳ್ಳಲು ದೇಹಕ್ಕೆ ಅಗತ್ಯವಿರುವ ಪೋಷಕಾಂಶ ಸರಬರಾಜನ್ನು ಮಾಡಲಿದೆ. ಒಆರ್ ಎಸ್ ಅನ್ನು ಅಸ್ವಸ್ಥತೆ ಕಾಡಿದ್ದ ಸಂದರ್ಭದಲ್ಲಿ ಹೆಚ್ಚು ಸೇವನೆ ಮಾಡಿದರೆ ಸಮಸ್ಯೆ ಪರಿಹಾರ ಆಗಲಿದೆ.
ಸನ್ ಸ್ಕ್ರೀನ್ ಜೊತೆಗಿರಲಿ:
ಬಿಸಿಲಿಗೆ ಹೋಗಬೇಕಾದ ಸಂದರ್ಭದಲ್ಲಿ ಚರ್ಮದ ಕಾಳಜಿಗಾಗಿ ಸನ್ ಸ್ಕ್ರೀಮ್ ಧರಿಸುವುದನ್ನು ಮರೆಯಬಾರದು. ಅತೀ ಹೆಚ್ಚು ಬೆವರಿದ್ದ ಸಂದರ್ಭದಲ್ಲಿ ಚರ್ಮದ ಮೇಲೆ ಬ್ಯಾಕ್ಟೀರಿಯಾ ಇತರ ಸೂಕ್ಷ್ಮಾಣು ಜೀವಿಗಳ ಪ್ರಾಬಲ್ಯ ಹೊಂದದಂತೆ ತಡೆಹಿಡಿಯಲು ಇದೊಂದು ಉಪಯುಕ್ತ ವಿಧಾನ ವಾಗಿದೆ. ಬೆಳಗ್ಗೆ ಹೊರಡುವಾಗಲೇ ಸನ್ ಸ್ಕ್ರೀನ್ ಬಳಸಿದರೆ ಸಂಜೆ ತನಕವು ಚರ್ಮದ ಆರೈಕೆ ಮಾಡಲಿದೆ. ಒಟ್ಟಿನಲ್ಲಿ ಇವೆಲ್ಲವನ್ನು ನೀವು ಅನುಸರಿಸಿದರೆ ಬಿಸಿಲಿನ ತಾಪಮಾನ ಸಮಸ್ಯೆ ನಿಮ್ಮನ್ನು ಕಾಡದಂತೆ ರಕ್ಷಣೆ ಮಾಡಬಹುದು.

































