ಮುಂಬೈ : ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಮತ್ತು ಕೆ.ಎಲ್ ರಾಹುಲ್ ದಂಪತಿ ಮಾ.24ರಂದು ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದರು. ಈ ಹಿನ್ನೆಲೆ ಮೊಮ್ಮಗಳ ಬಗ್ಗೆ ನಟ ಸುನೀಲ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಭಾವನ್ಮಾತಕ ಪೋಸ್ಟ್ ಮಾಡಿದ್ದಾರೆ.
ಜೀವನ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಯೋದು ತಮಾಷೆಯಾಗಿದೆ. ನಿಮ್ಮ ಕನಸುಗಳನ್ನು ವರ್ಷಗಟ್ಟಲೇ ಬೆನ್ನತ್ತಿ ಹೋಗುತ್ತಲೇ ಇರುತ್ತೀರಿ. ಅದರಿಂದ ನಿಮಗೆ ಖುಷಿ ಸಿಗುತ್ತದೆ ಎಂದು ನೀವು ಭಾವಿಸುತ್ತೀರಿ. ಸರಿಯಾದ ಪಾತ್ರಗಳು, ವ್ಯವಹಾರ, ಹಣ, ಜನಪ್ರಿಯತೆ ಎಲ್ಲವನ್ನೂ ಗಳಿಸುತ್ತೇವೆ. ಆದರೆ ಇದರಿಂದ ನಾನು ಏನು ಕಲಿತಿದ್ದೇನೆ ತಿಳಿದಿದೆಯಾ. ನಿಜವಾದ ಸಂತೋಷ ಸರಳವಾದ ವಿಷಯಗಳಿಂದ ಬರುತ್ತದೆ ಎಂದು ಸುನೀಲ್ ಶೆಟ್ಟಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಇತ್ತೀಚೆಗೆ ನಾನು ಅಜ್ಜನಾಗಿರೋದು ನನಗೆ ವರ್ಣಿಸಲಾಗದ ಒಂದು ಭಾವನೆ, ಅದೊಂದು ಖುಷಿ. ವ್ಯವಹಾರ, ನಟನೆ, ನಿರ್ಮಾಣವನ್ನು ಅರ್ಥಪೂರ್ಣವಾಗಿ ಮಾಡಲು ಪ್ರಯತ್ನಿಸಿದ್ದೇನೆ. ಇದರ ಬಗ್ಗೆ ನನಗೆ ಹೆಮ್ಮೆ ಇದೆ. ಆದರೆ ನಾನು ನನ್ನ ಮೊಮ್ಮಗಳನ್ನು ಎತ್ತಿಕೊಂಡಾಗ ಯಾವುದು ಮುಖ್ಯವಲ್ಲ ಎನಿಸುತ್ತದೆ. ಜೀವನದಲ್ಲಿ ನಿಜವಾಗಿಯೂ ಮುಖ್ಯವಾದುದನ್ನು ಅರಿತುಕೊಳ್ಳುವ ಹಂತಕ್ಕೆ ಬಂದಾಗ ಹೆಚ್ಚಿನ ರೀತಿಯ ಅನುಭವಗಳು ಆಗುತ್ತವೆ. ಮೊಮ್ಮಗಳನ್ನು ನನ್ನ ತೋಳಿನಲ್ಲಿ ಹಿಡಿದುಕೊಳ್ಳುವುದು ಸುಂದರ ಕ್ಷಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ವೇಳೆ, ಮಂಗಳೂರಿನಲ್ಲಿ ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿದ್ದಾರೆ. ಬೇಸಿಗೆಯಲ್ಲಿ ಬರಿಗಾಲಿನಲ್ಲಿ ಓಡುವುದು, ಬಯಲು ಪ್ರದೇಶದಲ್ಲಿ ಆಟವಾಡುವುದು. ಮನೆಯಲ್ಲಿ ತಯಾರಿಸಿದ ತಿಂಡಿಯನ್ನು ತಿಂದಿರುವ ಬಗ್ಗೆ ಅವರು ನೆನೆಪಿಸಿಕೊಂಡಿದ್ದಾರೆ. ಜೀವನದಲ್ಲಿ ನಾನು ಸಾಧಿಸಲು ಇನ್ನೂ ಬಹಳಷ್ಟಿದೆ. ಆದರೆ ಅದು ನನ್ನ ಒಂದು ಭಾಗ ಮಾತ್ರ. ನನ್ನ ಹೃದಯಕ್ಕೆ ಹತ್ತಿರವಾದದ್ದು ಏನು ಎಂಬುದರ ಬಗ್ಗೆ ನನಗೆ ಈಗ ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.
ಇನ್ನೂ ಈ ಪುಟ್ಟ ಹುಡುಗಿ ನನ್ನ ತೋಳುಗಳಲ್ಲಿ ಇದ್ದಾಳೆ. ನನ್ನ ಮಗಳು ಅಥಿಯಾ ತನ್ನ ಜೀವನದ ಅತ್ಯಂತ ತೃಪ್ತಿಕರ ಪಾತ್ರಕ್ಕೆ ಪರಿವರ್ತನೆಗೊಳ್ಳುವುದನ್ನು ನೋಡಿ ನಾನು ಹಗುರವಾಗಿದ್ದೇನೆ ಎಂದಿದ್ದಾರೆ.