ನವದೆಹಲಿ: ವಿದ್ಯಾರ್ಥಿಗಳು ಶೈಕ್ಷಣಿಕ ಒತ್ತಡದ ಕಾರಣಕ್ಕೆ ಸಾವಿಗಿ ಶರಣಾಗುತ್ತಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್ ಇದನ್ನು ತಡೆಯುವ ನಿಟ್ಟಿನಲ್ಲಿ ಕಾಲೇಜುಗಳಿಗೆ ಮಾರ್ಗಸೂಚಿಯೊಂದನ್ನು ಬಿಡುಗಡೆಗೊಳಿಸಿದೆ.
ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಮಾನಸಿಕ ಸುರಕ್ಷತೆ ಮತ್ತು ನಿಯಂತ್ರಕ ಮೇಲ್ವಿಚಾರಣೆಯನ್ನು ಕಡ್ಡಾಯಗೊಳಿಸುವ ರಾಷ್ಟ್ರೀಯ ಮಾರ್ಗಸೂಚಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಹೊರಡಿಸಿದೆ. ವಿದ್ಯಾರ್ಥಿಗಳ ಆತ್ಮಹತ್ಯೆಗಳಲ್ಲಿ ಆತಂಕಕಾರಿ ಏರಿಕೆಗೆ ಪ್ರತಿಕ್ರಿಯೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ನೀಡಿದ ಈ ತೀರ್ಪು, ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು, ಖಾಸಗಿ ತರಬೇತಿ ಕೇಂದ್ರಗಳು, ತರಬೇತಿ ಅಕಾಡೆಮಿಗಳು ಮತ್ತು ಹಾಸ್ಟೆಲ್ಗಳಿಗೆ ಅನ್ವಯಿಸುತ್ತದೆ.
ಜುಲೈ 2023ರಲ್ಲಿ ವಿಶಾಖಪಟ್ಟಣಂನ ಆಕಾಶ್ ಬೈಜು ಸಂಸ್ಥೆಯಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾಗ ಆತ್ಮಹತ್ಯೆ ಮಾಡಿಕೊಂಡ 17 ವರ್ಷದ ಮಿಸ್ ಎಕ್ಸ್ ಎಂದು ಕರೆಯಲ್ಪಡುವ ನೀಟ್ ಆಕಾಂಕ್ಷಿಯ ಪ್ರಕರಣದ ಹಿನ್ನೆಲೆಯಲ್ಲಿ ಈ ತೀರ್ಪು ಬಂದಿದೆ. ಆಕೆಯ ತಂದೆಯ ಅರ್ಜಿಗೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಆಂಧ್ರಪ್ರದೇಶ ಹೈಕೋರ್ಟ್ ಈ ಹಿಂದೆ ವಜಾಗೊಳಿಸಿದ್ದ ತೀರ್ಪನ್ನು ರದ್ದುಗೊಳಿಸಿ, ಪ್ರಕರಣವನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಿದೆ. ವಿದ್ಯಾರ್ಥಿಗಳು ಖಿನ್ನತೆಗೆ ಜಾರುತ್ತಿದ್ದಾರೆ. ಅತಿಯಾದ ಶೈಕ್ಷಣಿಕ ಒತ್ತಡ ಆತ್ಮಹತ್ಯೆಗೆ ಕಾರಣವೆಂದು ನ್ಯಾಯಾಲಯ ಹೇಳಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ದತ್ತಾಂಶವು 2022ರಲ್ಲಿ ಭಾರತದಲ್ಲಿ 170,924 ಆತ್ಮಹತ್ಯೆಗಳು ದಾಖಲಾಗಿವೆ ಎಂದು ಬಹಿರಂಗಪಡಿಸಿದೆ, ಅದರಲ್ಲಿ ಶೇ.7.6 ಅಂದರೆ ಸರಿಸುಮಾರು 13,044 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಇವುಗಳಲ್ಲಿ, 2,200ಕ್ಕೂ ಹೆಚ್ಚು ಮಕ್ಕಳು ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿರುವುದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.
ಮಾರ್ಗಸೂಚಿಯಲ್ಲೇನಿದೆ?
ಕಡ್ಡಾಯ ಮಾನಸಿಕ ಆರೋಗ್ಯ ವೃತ್ತಿಪರರು: 100ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಸಂಸ್ಥೆಗಳು ಕನಿಷ್ಠ ಒಬ್ಬ ಅರ್ಹ ಮಾನಸಿಕ ಆರೋಗ್ಯ ವೃತ್ತಿಪರರನ್ನು (ಮನಶ್ಶಾಸ್ತ್ರಜ್ಞ, ಸಲಹೆಗಾರ ಅಥವಾ ಸಾಮಾಜಿಕ ಕಾರ್ಯಕರ್ತ) ನೇಮಿಸಿಕೊಳ್ಳಬೇಕು. ಸಣ್ಣ ಸಂಸ್ಥೆಗಳು ಹೊರಗಿನಿಂದ ತಜ್ಞರನ್ನು ಕರೆಸಿಕೊಂಡು ಆಪ್ತ ಸಮಾಲೋಚನೆ ನಡೆಸಬೇಕು.
ಸಹಾಯವಾಣಿ: ಟೆಲಿ-ಮನಸ್ ಸೇರಿದಂತೆ ಸಹಾಯವಾಣಿ ಸಂಖ್ಯೆಗಳನ್ನು ಕ್ಯಾಂಪಸ್ಗಳು, ಹಾಸ್ಟೆಲ್ಗಳು, ಸಾಮಾನ್ಯ ಪ್ರದೇಶಗಳು ಮತ್ತು ವೆಬ್ಸೈಟ್ಗಳಲ್ಲಿ ಪ್ರಮುಖವಾಗಿ ಪ್ರದರ್ಶಿಸಬೇಕು.
ಸಿಬ್ಬಂದಿ ತರಬೇತಿ: ಎಲ್ಲ ಸಿಬ್ಬಂದಿಗೆ ವರ್ಷಕ್ಕೆ ಕನಿಷ್ಠ ಎರಡು ಬಾರಿ ಮಾನಸಿಕ ಪ್ರಥಮ ಚಿಕಿತ್ಸೆ, ಎಚ್ಚರಿಕೆ ಚಿಹ್ನೆ ಗುರುತಿಸುವಿಕೆ ಮತ್ತು ಉಲ್ಲೇಖ ಕಾರ್ಯವಿಧಾನಗಳಲ್ಲಿ ತರಬೇತಿ ನೀಡಬೇಕು. SC, ST, OBC, EWS, LGBTQ+ ವಿದ್ಯಾರ್ಥಿಗಳು ಮತ್ತು ಅಂಗವೈಕಲ್ಯ ಅಥವಾ ಬೇರೆ ಏನಾದರೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ವಿಶೇಷ ಆಪ್ತ ಸಮಾಲೋಚನೆ ನಡೆಸಬೇಕು.
ಲೈಂಗಿಕ ದೌರ್ಜನ್ಯ, ರ್ಯಾಗಿಂಗ್ ಮತ್ತು ಜಾತಿ, ಲಿಂಗ, ಧರ್ಮ ಅಥವಾ ದೃಷ್ಟಿಕೋನದ ಆಧಾರದ ಮೇಲೆ ತಾರತಮ್ಯವನ್ನು ವರದಿ ಮಾಡಲು ಸಂಸ್ಥೆಗಳು ಗೌಪ್ಯ ವ್ಯವಸ್ಥೆಗಳನ್ನು ಹೊಂದಿರಬೇಕು.
ಕೋಟಾ, ಜೈಪುರ, ಸಿಕಾರ್, ಚೆನ್ನೈ, ಹೈದರಾಬಾದ್, ದೆಹಲಿ ಮತ್ತು ಮುಂಬೈನಂತಹ ತರಬೇತಿ ಕೇಂದ್ರಗಳು ತೀವ್ರವಾದ ಶೈಕ್ಷಣಿಕ ಒತ್ತಡವನ್ನು ಹೊಂದಿದ್ದು ಅಂತಹ ಪ್ರದೇಶದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು.