ನವದೆಹಲಿ : ಆಪರೇಷನ್ ಸಿಂಧೂರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕರ್ನಲ್ ಖುರೇಷಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಧ್ಯಪ್ರದೇಶದ ಸಚಿವ ವಿಜಯ್ ಶಾ ಅವರ ಕ್ಷಮೆಯಾಚನೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ಪ್ರಕರಣವನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸಲಿ ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಅವರಿದ್ದ ಏಕ ಸದಸ್ಯ ಪೀಠ ತೀರ್ಪು ನೀಡಿದೆ.
ವಿಜಯ್ ಶಾ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಕೋರ್ಟ್, ನೀವು ಯಾವ ರೀತಿ ಕ್ಷಮೆಯಾಚಿಸಿದ್ದೀರಿ? ಕ್ಷಮೆಯಾಚನೆಗೆ ಸ್ವಲ್ಪ ಅರ್ಥವಿದೆ. ಕೆಲವೊಮ್ಮೆ ಜನರು ವಿಚಾರಣೆಯಿಂದ ಹೊರಬರಲು ಮಾತ್ರ ಸೌಮ್ಯ ಭಾಷೆ ಬಳಸುತ್ತಾರೆ. ಅಲ್ಲದೇ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ನಿಮ್ಮದು ಯಾವ ರೀತಿಯ ಕ್ಷಮೆಯಾಚನೆ? ನ್ಯಾಯಾಲಯ ಹೇಳಿದೆ ಎಂಬ ಕಾರಣಕ್ಕೆ ಕ್ಷಮೆ ಕೇಳಿದ್ದೀರಿ, ಇಲ್ಲಿಯವರೆಗೆ ನಿಮ್ಮ ಅಸಭ್ಯ ಹೇಳಿಕೆಗಳಿಗೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸಲು ನಿಮ್ಮನ್ನು ಏನು ತಡೆದಿತ್ತು ಎಂದು ಪೀಠ ತಿಳಿಸಿದೆ.
ಸಚಿವರ ವಿರುದ್ಧದ ಪ್ರಕರಣವನ್ನು ತನಿಖೆ ಮಾಡಲು ಮಂಗಳವಾರ ಬೆಳಗ್ಗೆ ಮೂವರು ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕು. ಅದು ಮಹಿಳಾ ಅಧಿಕಾರಿಯನ್ನು ಹೊಂದಿರಬೇಕು ಮತ್ತು ಮೇ 28 ರೊಳಗೆ ವರದಿಯನ್ನು ಸಲ್ಲಿಸಬೇಕು ಎಂದು ಏಕ ಸದಸ್ಯ ಪೀಠ ಆದೇಶ ಹೊರಡಿಸಿದೆ.
ವಿಜಯ್ ಶಾ ಬಂಧನದಿಂದ ವಿನಾಯಿತಿ ನೀಡಿರುವ ಕೋರ್ಟ್, ಇದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಅಲ್ಲದೇ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕಿತ್ತು. ಈ ಬಗ್ಗೆ ಉತ್ತರಿಸುವಂತೆ ಮಧ್ಯಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, ಇದನ್ನು ಪೀಠ ಗಮನಿಸುತ್ತದೆ. ನಿಮಗೆ ಇದೊಂದು ಅಗ್ನಿ ಪರೀಕ್ಷೆ ಎಂದು ಸರ್ಕಾರಕ್ಕೆ ಸೂಚನೆ ನೀಡಿದೆ.