ನವದೆಹಲಿ : ಅಕ್ರಮ ಡಿನೋಟಿಫಿಕೇಷನ್ ಸೇರಿದಂತೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ತನಿಖೆ ನಡೆಸಲು ಪೂರ್ವಾನುಮತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸೆಕ್ಷನ್ 17Aಗೆ ಸಂಬಂಧಿಸಿದ ಸ್ಪಷ್ಟನೆಗಾಗಿ ವಿಸ್ತೃತ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಿದೆ.
ನ್ಯಾ. ಜೆ.ಬಿ ಪಾರ್ದಿವಾಲಾ ನೇತೃತ್ವದ ದ್ವಿ ಸದಸ್ಯ ಪೀಠ ವಿಸ್ತೃತ ವಿಚಾರಣೆ ನಡೆಸಿತ್ತು. ಇಂದು ಈ ಬಗ್ಗೆ ತೀರ್ಪು ನೀಡಿದ ಪೀಠ, ಸುಪ್ರೀಂ ಕೋರ್ಟ್ನ ಇಬ್ಬರು ನ್ಯಾಯಾಧೀಶರ ಪೀಠವು ಹಿಂದೆ ಎರಡು ಪ್ರಕರಣಗಳಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿಯಲ್ಲಿ ಸಾರ್ವಜನಿಕ ಸೇವಕರ ವಿರುದ್ಧ ವಿಚಾರಣೆ ಅಥವಾ ತನಿಖೆಯನ್ನು ಪ್ರಾರಂಭಿಸುವ ಮೊದಲು ಪೂರ್ವಾನುಮತಿ ಪಡೆಯುವ ವಿಷಯದ ಬಗ್ಗೆ ವಿಭಿನ್ನ ತೀರ್ಪು ನೀಡಿವೆ.
ಈ ಹಂತದಲ್ಲಿ ಮತ್ತೊಂದು ತೀರ್ಪು ನೀಡುವುದು ಸೂಕ್ತವಲ್ಲ. ಹೀಗಾಗಿ, ಹೆಚ್ಚಿನ ವಿಚಾರಣೆಗಾಗಿ ನಾವು ವಿಸ್ತೃತ ಪೀಠಕ್ಕೆ ವರ್ಗಾಯಿಸುತ್ತಿದ್ದೇವೆ ಎಂದು ಹೇಳಿತು.
ಬೆಂಗಳೂರಿನ ಉದ್ಯಮಿ ಎ.ಆಲಂ ಪಾಷಾ ಅವರು ಯಡಿಯೂರಪ್ಪ ವಿರುದ್ಧ ತಾವು ನೀಡಿರುವ ದೂರನ್ನು ಪುನಃಸ್ಥಾಪಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ 2021ರ ಜನವರಿ 5 ರಂದು ಮಾನ್ಯ ಮಾಡಿತ್ತು. ಇದನ್ನು ಪ್ರಶ್ನಿಸಿ ಯಡಿಯೂರಪ್ಪ ಅವರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದೀವಾಲಾ ಮತ್ತು ನ್ಯಾ. ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠ ಏಪ್ರಿಲ್ 4ರಂದು ವಿಚಾರಣೆ ಪೂರ್ಣಗೊಳಿಸಿತು.
ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮತ್ತು ‘ಕರ್ನಾಟಕ ಉದ್ಯೋಗ ಮಿತ್ರ’ ಸಂಸ್ಥೆಯ ಮಾಜಿ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್ ಶಿವಸ್ವಾಮಿ ವಿರುದ್ಧ ಭ್ರಷ್ಟಾಚಾರ ಮತ್ತು ಕ್ರಿಮಿನಲ್ ಸಂಚು ಆರೋಪ ಮಾಡಿದ್ದರು. ದೇವನಹಳ್ಳಿಯಲ್ಲಿ 2011 ರಲ್ಲಿ 26 ಎಕರೆ ಡಿನೋಟಿಫಿಕೇಷನ್ ಮಾಡಿ ಅಕ್ರಮ ನಡೆಸಲಾಗಿದೆ ಎಂದು ಆರೋಪಿಸಿ ಆಲಂ ಪಾಷಾ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಯಡಿಯೂರಪ್ಪ ಹಾಗೂ ನಿರಾಣಿ ಅವರನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್ 2021ರ ಜನವರಿ 27ರಂದು ಆದೇಶ ನೀಡಿತ್ತು.