ದೆಹಲಿ: ಪ್ರಸ್ತುತ ನಡೆಯುತ್ತಿರುವ ಪೂಜಾ ಸ್ಥಳಗಳ ಕಾಯಿದೆಯ ವಿಚಾರಣೆ ಮುಗಿಯುವವರೆಗೂ ದೇಶದೆಲ್ಲೆಡೆ ಎಲ್ಲೂ ಧಾರ್ಮಿಕ ರಚನೆಗಳಿಗೆ (ಮಂದಿರ, ಮಸೀದಿ) ಸಂಬಂಧಿಸಿದಂತೆ ಯಾವುದೇ ಹೊಸ ಮೊಕದ್ದಮೆಗಳನ್ನು ಸ್ವೀಕರಿಸುವುದಿಲ್ಲ ಅಥವಾ ಸಮೀಕ್ಷೆ ನಡೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಹಾಗೇ, ಸುಪ್ರೀಂ ಕೋರ್ಟ್ ಅಸ್ತಿತ್ವದಲ್ಲಿರುವ ಧಾರ್ಮಿಕ ರಚನೆಗಳ ವಿರುದ್ಧ ಹೊಸ ದಾವೆಗಳಿಗೆ ತಡೆ ನೀಡಿದೆ. ಸದ್ಯಕ್ಕೆ ಭಾರತದಲ್ಲಿ ಪೂಜಾ ಸ್ಥಳಗಳ ಕಾಯ್ದೆಗೆ ಸಂಬಂಧಿಸಿದ ಹೊಸ ಅರ್ಜಿಗಳ ನೋಂದಣಿಯನ್ನು ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಕಾನೂನಿಗೆ ಸಂಬಂಧಿಸಿದಂತೆ ತನ್ನ ಮುಂದೆ ಬಾಕಿ ಉಳಿದಿರುವ ಎಲ್ಲಾ ಪ್ರಸ್ತುತ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿ, ವಿಲೇವಾರಿ ಮಾಡುವವರೆಗೆ ದೇಶದಲ್ಲಿ ಯಾವುದೇ ಹೊಸ ದಾವೆಗಳನ್ನು ನೋಂದಾಯಿಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪೂಜಾ ಸ್ಥಳಗಳ ಕಾಯಿದೆ 1991ರ ಸಿಂಧುತ್ವವನ್ನು ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ನಡೆಸುತ್ತಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್, ಕೆ.ವಿ. ವಿಶ್ವನಾಥನ್ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆಯನ್ನು ನಡೆಸುತ್ತಿದೆ. ಪೂಜಾ ಸ್ಥಳಗಳ ಕಾಯಿದೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಕುರಿತು ಅಫಿಡವಿಟ್ ಸಲ್ಲಿಸಲು ಭಾರತ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ 4 ವಾರಗಳ ಕಾಲಾವಕಾಶವನ್ನೂ ನೀಡಿದೆ. ಹಾಗೇ, ಸರ್ವೋಚ್ಚ ನ್ಯಾಯಾಲಯವು ಯಾವುದೇ ವಿಚಾರಣಾ ನ್ಯಾಯಾಲಯ ಮಸೀದಿಗಳು ಅಥವಾ ದರ್ಗಾಗಳು ಇತ್ಯಾದಿಗಳ ವಿರುದ್ಧ ಬಾಕಿ ಇರುವ ಮೊಕದ್ದಮೆಗಳಲ್ಲಿ ಸಮೀಕ್ಷೆ ಆದೇಶಗಳನ್ನು ಒಳಗೊಂಡಂತೆ ಪರಿಣಾಮಕಾರಿ ಮಧ್ಯಂತರ ಅಥವಾ ಅಂತಿಮ ಆದೇಶಗಳನ್ನು ಹೊರಡಿಸಬಾರದು ಎಂದು ಆದೇಶಿಸಿದೆ.
ಏನಿದು ಪ್ರಕರಣ: ಪೂಜಾ ಸ್ಥಳಗಳ ಕಾಯಿದೆ 1947ರ ಆಗಸ್ಟ್ 15ಕ್ಕಿಂತ ಮೊದಲಿನ ಧಾರ್ಮಿಕ ಸ್ಥಳಗಳನ್ನು ಬದಲಾಯಿಸುವಂತಿಲ್ಲ, ಆ ಪೂಜಾ ಸ್ಥಳಗಳನ್ನು ಯಥಾಸ್ಥಿತಿಯಲ್ಲೇ ಮುಂದುವರೆಸಬೇಕೆಂದು ಹೇಳಿತ್ತು. ಇದು ಧಾರ್ಮಿಕ ಹಕ್ಕಿನ ಉಲ್ಲಂಘನೆಯಾದ್ದರಿಂದ ಈ ಕಾಯಿದೆ ಏಕಪಕ್ಷೀಯವಾಗಿದೆ ಎಂದು ಬಿಜೆಪಿ ನಾಯಕರಾದ ಅಶ್ವಿನಿ ಉಪಾಧ್ಯಾಯ, ಸುಬ್ರಹ್ಮಣ್ಯಸ್ವಾಮಿ ಮುಂತಾದವರು ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿದೆ. ಪ್ರಕರಣದ ಮುಂದಿನ ವಿಚಾರಣೆಗೆ ಸುಪ್ರೀಂ ಕೋರ್ಟ್ ದಿನಾಂಕ ನಿಗದಿ ಮಾಡಿದ್ದು, ಅಲ್ಲಿಯವರೆಗೆ ಪರಿಸ್ಥಿತಿಯನ್ನು ಯಥಾಸ್ಥಿತಿಯಲ್ಲಿಡಲು ಸೂಚಿಸಿದೆ.

































