ನವದೆಹಲಿ : ಆಧಾರ್ ಕಾರ್ಡ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ನುಸುಳುಕೋರರ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.
ಅಲ್ಲದೇ ವಿದೇಶಿಗರನ್ನ ಮತದಾರರ ಪಟ್ಟಿಯಲ್ಲಿ ಸೇರಿಸೋದಕ್ಕೆ ಆಧಾರ್ ಕಾರ್ಡ್ ಒಂದೇ ಸಾಕೇ ಎಂದು ಕೇಳಿದೆ. ಆಧಾರ್ ಮತ್ತು ಕಲ್ಯಾಣ ಸವಲತ್ತುಗಳನ್ನ ಪಡೆಯಲು ಯಶಸ್ವಿಯಾಗಿರುವ ವಿದೇಶಿಯರಿಗೆ ಮತದಾನಕ್ಕೆ ಅವಕಾಶ ನೀಡಬೇಕೇ ಎಂದು ಚಾಟಿ ಬೀಸಿದೆ.
ಸಿಜೆಐ ಸೂರ್ಯಕಾಂತ್ ನೇತೃತ್ವದ ಪೀಠವು ಇಂದು ಹಲವಾರು ರಾಜ್ಯಗಳಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ನಡೆಸುವ ಚುನಾವಣಾ ಆಯೋಗದ ಕ್ರಮದ ಸಿಂಧುತ್ವ ಪ್ರಶ್ನಿಸುವ ಅರ್ಜಿಗಳ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರಿಗೆ, ಮತದಾನದ ಹಕ್ಕುಗಳಿಗೆ ಆಧಾರ್ ಮಾತ್ರವೇ ಸ್ವಯಂಚಾಲಿತ ಮಾರ್ಗವಾಗಬಹುದೇ ಎಂದು ಕೇಳಿದೆ.
ʻಆಧಾರ್ʼ ಒಂದು ಕಾನೂನಿನ ರಚನೆಯಾಗಿದೆ. ಕಲ್ಯಾಣ ಸೌಲಭ್ಯಗಳನ್ನ ಪಡೆಯಲು ಆಧಾರ್ ಕಾರ್ಡ್ ಬಳಕೆಯನ್ನ ಯಾರೂ ಕಡೆಗಣಿಸಲು ಸಾಧ್ಯವಿಲ್ಲ. ಹಾಗಂತ ಆಧಾರ್ ಪಡೆದಿರುವ ಕಾರಣಕ್ಕೆ ಮತದಾರರನ್ನಾಗಿ ಮಾಡಬೇಕು ಎಂದರ್ಥವೇ? ಎಂದು ಪೀಠವು ಪ್ರಶ್ನೆ ಮಾಡಿದೆ.
































