ರಾಜಸ್ಥಾನ : ಯುಪಿಎಸ್ಸಿ ಪರೀಕ್ಷೆಗಳು ವಿಶ್ವದ ಅತಿ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿವೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್, ಐಪಿಎಸ್, ಐಎಫ್ಎಸ್ನಂತಹ ಉನ್ನತ ಸರ್ಕಾರಿ ಹುದ್ದೆಗಳನ್ನು ಪಡೆಯುವುದು ಅನೇಕ ಅಭ್ಯರ್ಥಿಗಳ ಕನಸಾಗಿರುತ್ತದೆ. ಹೀಗೆ ತಮ್ಮ ಐಎಎಸ್ ಅಧಿಕಾರಿಯಾಗುವ ಕನಸನ್ನ ನನಸಾಗಿಸಿಕೊಂಡ ಸ್ವಾತಿ ಮೀನಾ ನಾಯ್ಕ್ ಅವರ ಯಶೋಗಾಥೆ ಇದು.
ಸ್ವಾತಿ ಮೀನಾ ನಾಯ್ಕ್ ರಾಜಸ್ಥಾನದ ಸಿಕರ್ ಮೂಲದವರು. ಅವರು ತಮ್ಮ ಶಾಲಾ ಶಿಕ್ಷಣವನ್ನು ತವರು ನಗರದಲ್ಲಿ ಪೂರ್ಣಗೊಳಿಸಿದರು. ನಂತರ ಅಜ್ಮೀರ್ನ ಸೋಫಿಯಾ ಗರ್ಲ್ಸ್ ಕಾಲೇಜಿನಲ್ಲಿ ಪದವಿ ಪಡೆದರು. ಅವರ ತಂದೆ ರಾಜಸ್ಥಾನ ಅಡ್ಮಿನಿಸ್ಟ್ರೇಟಿವ್ ಸರ್ವಿಸ್ ಅಧಿಕಾರಿ ಮತ್ತು ಅವರ ತಾಯಿ ಡಾ. ಸರೋಜಾ ಮೀನಾ ಪೆಟ್ರೋಲ್ ಪಂಪ್ ಅನ್ನು ನಿರ್ವಹಿಸುತ್ತಿದ್ದರು. ಅವರ ಕಿರಿಯ ಸಹೋದರಿ 2011ರ ಬ್ಯಾಚ್ನ ಐಎಫ್ಎಸ್ ಅಧಿಕಾರಿ.
ಸ್ವಾತಿ ಮೀನಾ ನಾಯ್ಕ್ ಅವರು 2007ರಲ್ಲಿ ಕೇವಲ 22ನೇ ವಯಸ್ಸಿನಲ್ಲಿ, ತಮ್ಮ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ 260 ಅಖಿಲ ಭಾರತ ರ್ಯಾಂಕ್ ಪಡೆದರು. ಈ ಮೂಲಕ ಸ್ವಾತಿ ಅವರು ತಮ್ಮ ಬ್ಯಾಚ್ನ ಅತ್ಯಂತ ಕಿರಿಯ ಐಎಎಸ್ ಅಧಿಕಾರಿಯಾಗಿದ್ದರು.
ಆರಂಭದಲ್ಲಿ ವೈದ್ಯರಾಗಲು ಬಯಸಿದ್ದ ಸ್ವಾತಿ ಅವರು, ನಂತರ ಐಎಎಸ್ ಅಧಿಕಾರಿಯಾಗಲು ನಿರ್ಧರಿಸಿದರು. ಸ್ವಾತಿ ಅವರು 2008ರ ಮಧ್ಯಪ್ರದೇಶ ಕೇಡರ್ನ ಐಎಎಸ್ ಅಧಿಕಾರಿಯಾಗಿದ್ದಾರೆ. ಪ್ರಸ್ತುತ, ಕೇಂದ್ರ ಸರ್ಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಅಡಿಯಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಮಧ್ಯಪ್ರದೇಶ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.