ನವದೆಹಲಿ : ಮುಂಬೈನ ತಾಜ್ ಹೋಟೆಲ್ ಮೇಲೆ 2008ರಲ್ಲಿ ನಡೆದ ಉಗ್ರ ದಾಳಿಯ ರೂವಾರಿ ತಹವ್ವುರ್ ಹುಸೇನ್ ರಾಣಾನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) 18 ದಿನಗಳ ಕಸ್ಟಡಿಗೆ ತೆಗೆದುಕೊಂಡಿದೆ.
ಹೋಟೆಲ್ ಮೇಲಿನ ಮಾರಕ ದಾಳಿ ಹಿಂದಿನ ಸಂಪೂರ್ಣ ಪಿತೂರಿಯನ್ನು ಬಯಲು ಮಾಡಲು ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ಎನ್‌ಐಎ ಶುಕ್ರವಾರ ಅಧಿಕೃತವಾಗಿ ತಿಳಿಸಿದೆ.
ಗುರುವಾರ ಸಂಜೆ ಸಂಚುಕೋರ ರಾಣಾನನ್ನು ಅಮೆರಿಕದ ಲಾಸ್ ಏಂಜಲೀಸ್‌ನಿಂದ ವಿಶೇಷ ವಿಮಾನದಲ್ಲಿ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಎನ್‌ಎಸ್‌ಜಿ ಮತ್ತು ಎನ್‌ಐಎ ತಂಡಗಳ ಬೆಂಗಾವಲಿನೊಂದಿಗೆ ಭಾರತಕ್ಕೆ ಕರೆತರಲಾಯಿತು. ಅಮೆರಿಕದಿಂದ ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಣಾನನ್ನ ಔಪಚಾರಿಕವಾಗಿ ಬಂಧಿಸಲಾಯಿತು. ನಂತರ ದೆಹಲಿ ಪೊಲೀಸರ ವಿಶೇಷ ಶಸ್ತ್ರಾಸ್ತ್ರಗಳು, ತಂತ್ರಗಳು (ಎಸ್‌ಡಬ್ಲ್ಯೂಎಟಿ) ಮತ್ತು ಇತರ ಭದ್ರತಾ ಸಿಬ್ಬಂದಿಯನ್ನು ಒಳಗೊಂಡ ಭಾರೀ ಭದ್ರತೆಯೊಂದಿಗೆ ಅಧಿಕಾರಿಗಳು ರಾಣಾನನ್ನು ಪಟಿಯಾಲ ಹೌಸ್‌ನಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯದ ಎದುರು ಹಾಜರುಪಡಿಸಿದರು.
ನ್ಯಾಯಾಲಯವು ರಾಣಾನನ್ನು 18 ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ನೀಡಿ ಆದೇಶಿಸಿದ್ದು, ಈ ಅವಧಿಯಲ್ಲಿ ತಾಜ್ ಹೋಟೆಲ್ ದಾಳಿಯ ಹಿಂದಿನ ಸಂಪೂರ್ಣ ಪಿತೂರಿ ಬಯಲು ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ ಎಂದು ತನಿಖಾ ಸಂಸ್ಥೆ ಹೇಳಿದೆ.