ಬೆಂಗಳೂರು: ಕರ್ನಾಟಕ ಬಜೆಟ್ 2025 ಮಾರ್ಚ್ ಮೊದಲ ವಾರದಲ್ಲಿ ಮಂಡನೆಯಾಗುವ ಸಾಧ್ಯತೆ ಇದ್ದು, ಈ ಹಿನ್ನಲೆ ಸಿಎಂ ಸಿದ್ದರಾಮಯ್ಯ ಎರಡನೇ ದಿನವೂ ಕಾವೇರಿ ನಿವಾಸದಲ್ಲಿ ಇಲಾಖಾವಾರು ಅಧಿಕಾರಿಗಳ ಜತೆಗೆ ಸಭೆ ನಡೆಸಿದ್ದಾರೆ. ಎಡಗಾಲಿನ ನೋವು ಹಿನ್ನಲೆ ಭಾನುವಾರದಿಂದ ವಿಶ್ರಾಂತಿಯಲ್ಲಿದ್ದ ಸಿಎಂ ಸಿದ್ದರಾಮಯ್ಯ, ಬಜೆಟ್ ಕುರಿತ ಪೂರ್ವಸಿದ್ಧತಾ ಸಭೆಗಳನ್ನ ನಡೆಸಿದ್ದಾರೆ. ವಿವಿಧ ಇಲಾಖೆಗಳ ಬೇಡಿಕೆಗಳ ಕುರಿತು ಒಟ್ಟು ಐದು ದಿನ -ಇಲಾಖಾವಾರು ಆಯವ್ಯಯ ಸಿದ್ಧತಾ ಸಭೆ ನಡೆಯಲಿದೆ. ಫೆ.6 ರಿಂದ ಫೆ.8ರವರೆಗೆ ಮೂರು ದಿನ ಬೆಳಗ್ಗೆಯಿಂದ ಸಂಜೆಯವರೆಗೂ ಇಲಾಖಾವಾರು ಸಭೆಗಳನ್ನು ಸಿಎಂ ನಡೆಸಲಿದ್ದು, ಇಂದು ಕೂಡ ಸಮಾಜ ಕಲ್ಯಾಣ ಇಲಾಖೆಯ ಜೊತೆ ಸಭೆ ನಡೆಸಿ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಲಿದ್ದಾರೆ. ಇಂದು ಕೂಡ ಕಾವೇರಿ ನಿವಾಸದಲ್ಲಿ ನಿವೃತ್ತ IAS ಅಧಿಕಾರಿ ಕೆ.ಪಿ.ಕೃಷ್ಣನ್ ಅವರ ಅಧ್ಯಕ್ಷತೆಯ Resources Mobilisation Committee ಜೊತೆಗೆ ಬಜೆಟ್ ಸಂಬಂಧದ ಸಭೆ ನಡೆಸಿದರು. ಇದೇ ವೇಳೆ ಮುಖ್ಯಮಂತ್ರಿ ಸಮ್ಮುಖದಲ್ಲಿ ಯುನೈಟೆಡ್ ಕಿಂಗ್ ಡಮ್ ನ ಲಿವರ್ ಪೂಲ್ ವಿಶ್ವ ವಿದ್ಯಾಲಯ ರಾಜ್ಯ ಸರ್ಕಾರದ ಜೊತೆಗೆ MOU ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು ಲಿವರ್ ಪೂಲ್ ವಿವಿಯ VC ಟಿಮ್ ಜೋನ್ಸ್ , ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಮತ್ತು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 
				 
         
         
         
															 
                     
                    

































 
    
    
        