ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಕೆಲವು ದಿನಗಳ ಹಿಂದೆ ನಡೆದ ಪ್ರವಾಸಿಗರ ಮಾರಣಹೋಮದ ಬೆನ್ನಲ್ಲೇ ಉಗ್ರರು ಕಣಿವೆ ರಾಜ್ಯದಲ್ಲಿ ಮತ್ತು ಡೆಡ್ಲಿ ಅಟ್ಯಾಕ್ಗೆ ಸಂಚು ರೂಪಿಸಿರುವುದು ಬಯಲಾಗಿದೆ. ಈ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ಮೂಲಗಳು ನೀಡಿದ್ದು, ಹೈ ಪ್ರೊಫೈಲ್ ಭಯೋತ್ಪಾದಕರು ಮತ್ತು ಶಂಕಿತ ಉಗ್ರರನ್ನು ಇರಿಸಿರುವ ಹಲವಾರು ಜೈಲುಗಳು ಭಯೋತ್ಪಾದಕ ದಾಳಿಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿವೆ. ಶ್ರೀನಗರ ಕೇಂದ್ರ ಜೈಲು ಮತ್ತು ಜಮ್ಮುವಿನ ಕೋಟ್ ಬಲ್ವಾಲ್ ಜೈಲುಸೇರಿದಂತೆ ಅನೇಕ ಜೈಲುಗಳನ್ನುಗುರಿಯಾಗಿಸಿ ದಾಳಿ ನಡೆಸುವ ಬಗ್ಗೆ ಉಗ್ರರು ಸಂಚು ರೂಪಿಸಿದ್ದಾರೆ ಎನ್ನಲಾಗಿದೆ.
ಪಹಲ್ಗಾಮ್ ದಾಳಿ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ, ಭಾರತೀಯ ಸೇನೆಯ ವಾಹನ ದಾಳಿ ಪ್ರಕರಣದಲ್ಲಿ ನಿಸಾರ್ ಮತ್ತು ಮುಷ್ತಾಕ್ ಅವರನ್ನು ವಿಚಾರಣೆ ನಡೆಸಿದ ನಂತರ ಇದು ಬಂದಿದೆ. ಅವರಿಬ್ಬರನ್ನೂ ಕೋಟ್ ಬಲ್ವಾಲ್ ಜೈಲಿನಲ್ಲಿ ಇರಿಸಲಾಗಿದೆ. ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು, ಡಿಜಿ ಸಿಐಎಸ್ಎಫ್, ಆರ್ಎಸ್ ಭಟ್ಟಿ ಅವರು ಭಾನುವಾರ ಶ್ರೀನಗರದಲ್ಲಿ ಭದ್ರತಾ ಗ್ರಿಡ್ನ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿ ಜೈಲುಗಳಿಗೆ ಭದ್ರತೆ ಹೆಚ್ಚಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಗಮನಾರ್ಹವಾಗಿ, ಸಿಐಎಸ್ಎಫ್ ಅಕ್ಟೋಬರ್ 2023 ರಲ್ಲಿ ಜಮ್ಮು ಮತ್ತು ಕಾಶ್ಮೀರ ಜೈಲುಗಳ ಭದ್ರತೆಯನ್ನು ವಹಿಸಿಕೊಂಡಿತ್ತು. ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಬೆದರಿಕೆಯ ಹಿನ್ನೆಲೆಯಲ್ಲಿ ಈ ಸಭೆಯನ್ನು ನಡೆಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಅನೇಕ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮತ್ತೊಂದೆಡೆ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಉಗ್ರರ ಮನೆಗಳನ್ನು ಸಹ ಧ್ವಂಸಗೊಳಿಸಲಾಗಿದೆ.
ಏಪ್ರಿಲ್ 22 ರಂದು ಪಹಲ್ಗಾಮ್ನ ಬೈಸರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ನೇಪಾಳಿ ಪ್ರಜೆ ಸೇರಿದಂತೆ 26 ಜನರು ಸಾವನ್ನಪ್ಪಿದ್ದಾರೆ. ವರದಿಗಳ ಪ್ರಕಾರ, ಏಪ್ರಿಲ್ 19 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜಮ್ಮು ಮತ್ತು ಕಾಶ್ಮೀರ ಭೇಟಿಯ ಸಮಯದಲ್ಲಿ ಶ್ರೀನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಯೋತ್ಪಾದಕ ದಾಳಿಯನ್ನು ಯೋಜಿಸಲಾಗಿತ್ತು. ಪ್ರತಿಕೂಲ ಹವಾಮಾನದಿಂದಾಗಿ ಅವರ ಭೇಟಿಯನ್ನು ರದ್ದುಗೊಳಿಸಿದ ನಂತರ, ಭಯೋತ್ಪಾದಕರು ಪಹಲ್ಗಾಮ್ನಲ್ಲಿ ದಾಳಿಯನ್ನು ನಡೆಸಲು ಸಂಚು ರೂಪಿಸಿದ್ದರು. ಶ್ರೀನಗರದಲ್ಲಿ ದಾಳಿ ನಡೆಸುವ ಬಗ್ಗೆ ಗುಪ್ತಚರ ಮೂಲಗಳು ಎಚ್ಚರಿಕೆ ನೀಡಿದ್ದರೂ, ಪಹಲ್ಗಾಮ್ನಲ್ಲಿ ಸಂಭವನೀಯ ದಾಳಿಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಮೂಲಗಳು ತಿಳಿಸಿವೆ. ಇನ್ನು ಪಹಲ್ಗಾಮ್ ದಾಳಿ ಬಳಿಕ ಎರಡೂ ರಾಷ್ಟ್ರಗಳ ನಡುವೆ ಗಡಿ ಉದ್ವಿಗ್ನತೆ ಹೆಚ್ಚಾಗಿದ್ದು, ಪಾಕಿಸ್ತಾನ ಪದೇ ಪದೇ ಕದನ ವಿರಾಮವನ್ನು ಉಲ್ಲಂಘಿಸುತ್ತಿದ್ದು, ಭಾರತೀಯ ಸೇನೆಯು ತ್ವರಿತವಾಗಿ ಪ್ರತೀಕಾರ ತೀರಿಸಿಕೊಂಡಿದೆ.