ಕೋಲ್ಕತ್ತಾ: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ 2 ಪಂದ್ಯಗಳ ಟೆಸ್ಟ್ ಸರಣಿ ನ.14ರಿಂದ ಶುರುವಾಗಿದೆ. ಶನಿವಾರ ಸಂಜೆ ಮೈದಾನದಲ್ಲಿ ತೀವ್ರ ಕುತ್ತಿಗೆ ನೋವಿನಿಂದ ಬಳಲಿದ ಟೀಂ ಇಂಡಿಯಾ ಕ್ಯಾಪ್ಟನ್ ಶುಭಮನ್ ಗಿಲ್ ಆಸ್ಪತ್ರೆಗೆ ದಾಖಲಾಗಿದ್ದು, 2ನೇ ಟೆಸ್ಟ್ ಪಂದ್ಯ ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ.
ಈಗಾಗಲೇ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಮೇಲುಗೈ ಸಾಧಿಸಿರುವ ಟೀಂ ಇಂಡಿಯಾ ಪಂದ್ಯ ಗೆಲ್ಲುವ ವಿಶ್ವಾಸದಲ್ಲಿದೆ. ಈ ನಡುವೆ ಶುಭಮನ್ ಗಿಲ್ ಮೈದಾನದಲ್ಲಿ ತೀವ್ರ ಕುತ್ತಿಗೆ ನೋವಿನಿಂದ ಬಳಲಿದ್ದು, ಅವರನ್ನ ಸ್ಟ್ರೆಚರ್ ಮೂಲಕ ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯಲಾಗಿತ್ತು. ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಗಿಲ್ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ನಿಗಾ ವಹಿಸಿದ್ದಾರೆ.
ಮೊದಲು ಗಿಲ್ ನಾಲ್ಕು ಮಂದಿಯ ಸಹಾಯದಿಂದ ಮೈದಾನದಿಂದ ಹೊರ ನಡೆದಿದ್ದರು. ಸೈಮನ್ ಹರ್ಮರ್ ಅವರ ಎಸೆತವನ್ನ ಬೌಂಡರಿಗಟ್ಟುವ ಸಂದರ್ಭದಲ್ಲಿ ಗಿಲ್ ಅವರಿಗೆ ಕುತ್ತಿಗೆ ಭಾಗದಲ್ಲಿ ತೀವ್ರ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ತಂಡದ ವೈದ್ಯರು ಧಾವಿಸಿದರು. ಕೇವಲ ಮೂರು ಎಸೆತಗಳಲ್ಲಿ ನಾಲ್ಕು ರನ್ ಗಳಾಗಿದ್ದಾಗ ಗಾಯಗೊಂಡು ಮೈದಾನದಿಂದ ಹೊರನಡೆದರು.
































