ಬೆಂಗಳೂರು: ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಮೂಲಕ ರಸ್ತೆ ನಿರ್ಮಿಸುವ ಸಾರ್ವಜನಿಕರ ಹಣದ ಲೂಟಿಯ ಯೋಜನೆಯನ್ನು ಉಪ ಮುಖ್ಯಮಂತ್ರಿಗಳು, ರಾಜ್ಯ ಸರಕಾರ, ಬಿಬಿಎಂಪಿ ಅಧಿಕಾರಿಗಳು ಯಾವುದೇ ಕಾರಣಕ್ಕೂ ಮಾಡದ ರೀತಿ ಬಿಜೆಪಿ ಹೋರಾಟ ಮಾಡಲಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ಅವರು ಎಚ್ಚರಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನದ’ದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಟನೆಲ್ ರಸ್ತೆ ಯೋಜನೆಯನ್ನು ಬಿಜೆಪಿ ವಿರೋಧಿಸುತ್ತದೆ. ಸಾರ್ವಜನಿಕರ ಒಂದೊಂದು ರೂಪಾಯಿಗೆ ನ್ಯಾಯ ಸಿಗುವ ರೀತಿಯಲ್ಲಿ ನಾವು ಹೋರಾಟ ಮಾಡಲಿದ್ದೇವೆ ಎಂದು ಅವರು ತಿಳಿಸಿದರು.
ಟನೆಲ್ ರಸ್ತೆಯ ಡಿಪಿಆರ್, ಸಾಧ್ಯಾಸಾಧ್ಯತೆ ವರದಿಯಲ್ಲಿ ಸಮಸ್ಯೆ ಇದೆ. ಡಿಬಾರ್ ಆದ ಕನ್ಸಲ್ಟೆಂಟ್ ಅನ್ನು ನೇಮಿಸಿ ಇದನ್ನು ಸಿದ್ಧಪಡಿಸಿದ್ದಾರೆ ಎಂದು ಆರೋಪಿಸಿದರು. ಟನೆಲ್ ರಸ್ತೆಯು ಕಾಂಗ್ರೆಸ್ ಜೋಬನ್ನು ತುಂಬಿಸುವ ಯೋಜನೆ ಎಂದು ಅವರು ದೂರಿದರು. ಮಾಧ್ಯಮಗಳ ಮೂಲಕ ಇವತ್ತು ಜನಜಾಗೃತಿ ಶುರು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಎಲ್ಲ ಸಂಸದರು, ಶಾಸಕರು, ನಮ್ಮ ರಾಜ್ಯಾಧ್ಯಕ್ಷರು, ಬೆಂಗಳೂರಿನ ಬಿಜೆಪಿಯ ನಮ್ಮೆಲ್ಲ ನಾಯಕರು ಚರ್ಚೆ ಮಾಡಲಿದ್ದೇವೆ. ಕಾನೂನಾತ್ಮಕ ಹೋರಾಟ, ಜನಜಾಗೃತಿ ಮೊದಲಾದ ವಿಷಯಗಳ ಚಿಂತನೆ ನಡೆಸುತ್ತೇವೆ. ಇದು ಸಾರ್ವಜನಿಕರ ಹಣದ ದೊಡ್ಡ ಲೂಟಿ ಎಂದು ಆರೋಪಿಸಿದರು.
ಡಿಪಿಆರ್‍ನಲ್ಲಿ ಬೆಂಗಳೂರಿನ ಮೆಟ್ರೋ ಯೋಜನೆ ಎಂದಿದೆ. ಬಿಬಿಎಂಪಿಯು 9.5 ಕೋಟಿಯನ್ನು ಡಿಪಿಆರ್‍ಗೆ ಖರ್ಚು ಮಾಡಿದೆ. ಮೆಟ್ರೋ ಸಂಬಂಧಿಸಿದ ಯೋಜನೆಯನ್ನೇ ಕಟ್ ಆಂಡ್ ಪೇಸ್ಟ್ ಮಾಡಿ ಇದನ್ನು ತಯಾರಿಸಿದ್ದಾರೆ ಎಂದು ಅವರು ಆರೋಪಿಸಿದರು. ಈ ಭಂಡತನ ಹೇಗಿದೆ ಎಂದರೆ, ನಾಸಿಕ್, ಮಾಳೆಗಾಂವ್ ಉದಾಹರಣೆ ನೀಡಿ ಕರ್ನಾಟಕದ ಜನ ದಡ್ಡರೆಂದು ಭಾವಿಸಿದರೆ, ಈ ಥರ ಭಂಡತನದಲ್ಲಿ ಜನರ ದುಡ್ಡು ಹೊಡೆಯಬಹುದೆಂದು ನಿಂತರೆ ಅಸಹ್ಯ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರ ತಡೆಯಲು ಇಂಥ ದೊಡ್ಡ ಯೋಜನೆಯನ್ನು ಡಿಎಂಎಲ್‍ಟಿಎ ಕಾನೂನಿನಂತೆ ಮಾಡಲು ನಮ್ಮ ಸರಕಾರ ತಿಳಿಸಿತ್ತು. ಇವರು ಆ ಕಾನೂನು ಜಾರಿಯಲ್ಲಿದ್ದರೂ ಇವರು ಯೋಜನಾ ವರದಿ ಮಾಡಿ ಟೆಂಡರ್ ಕರೆಯಲು ಹೊರಟಿದ್ದಾರೆ ಎಂದು ಟೀಕಿಸಿದರು.