ಬೆಂಗಳೂರು : ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಮಾನವೀಯತೆಯ ಲವಲೇಶವಾದರೂ ಇದ್ದರೆ ಭಯೋತ್ಪಾದಕರ ದಾಳಿಯಿಂದ ಮೃತಪಟ್ಟ ಎರಡೂ ಕುಟುಂಬಕ್ಕೆ ಕನಿಷ್ಠ 1 ಕೋಟಿಯನ್ನಾದರೂ ಕೊಡುತ್ತಿದ್ದರು ಎಂದು ಬೆಂಗಳೂರು ದಕ್ಷಿಣ ಸಂಸದ ಹಾಗೂ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆ ಮೊತ್ತವನ್ನು ಬ್ಯಾಂಕಿನಲ್ಲಿ ನಿರಖು ಠೇವಣಿ (ಎಫ್‍ಡಿ) ಇಟ್ಟರೆ ಅದರ ಬಡ್ಡಿಯಿಂದ ಅವರ ಕುಟುಂಬ, ಶಿಕ್ಷಣ ನಡೆಯುತ್ತಿತ್ತು. ಪಕ್ಕದ ರಾಜ್ಯದಲ್ಲಿ ಆನೆ ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟವರಿಗೆ ಈ ರಾಜ್ಯದ ಮುಖ್ಯಮಂತ್ರಿಗಳು 15 ಲಕ್ಷ ಕೊಟ್ಟಿದ್ದರು. ಆದರೆ, ನಮ್ಮ ರಾಜ್ಯದಲ್ಲಿ ಭೀಭತ್ಸವಾಗಿ, ಭೀಕರವಾಗಿ ಭಯೋತ್ಪಾದಕರ ದಾಳಿಯಲ್ಲಿ ಮೃತರಾದ ಇಬ್ಬರು ಕುಟುಂಬದವರಿಗೆ ಅದಕ್ಕಿಂತ ಜಾಸ್ತಿ ಅಲ್ಲ; ಅಷ್ಟಾದರೂ ಕೊಡುವ ಯೋಗ್ಯತೆ ಈ ಸರಕಾರಕ್ಕೆ ಇಲ್ಲವಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮುಸ್ಲಿಂ ಓಟಿಗೆ ತಮ್ಮನ್ನು ತಾವು ಮಾರಿಕೊಂಡ ಕಾಂಗ್ರೆಸ್ ಪಕ್ಷದಿಂದ ನಾವು ಇದಕ್ಕಿಂತ ಜಾಸ್ತಿ ನಿರೀಕ್ಷೆ ಮಾಡಲು ಸಾಧ್ಯವೇ ಇಲ್ಲ; ಈ ಕುಟುಂಬಗಳಿಗೆ ಶಕ್ತಿ ಕೊಡುವ ಜವಾಬ್ದಾರಿ ಹಿಂದೂ ಸಮಾಜಕ್ಕೆ ಇದೆ. ಭಯೋತ್ಪಾದಕರ ಕೃತ್ಯ ಖಂಡಿಸಿ ಮೊನ್ನೆ ಬೆಂಗಳೂರು ದಕ್ಷಿಣದಲ್ಲಿ ನಾವು ಪಂಜಿನ ಮೆರವಣಿಗೆ ಮಾಡಿದ್ದೇವೆ. ರಾಜ್ಯ ಸರಕಾರ ಕೊಟ್ಟ ಪರಿಹಾರಕ್ಕಿಂತ ಒಂದು ರೂ. ಹೆಚ್ಚು ಪರಿಹಾರವನ್ನು ಸಂಗ್ರಹಿಸಿ ಕೊಡಬೇಕೆಂದು ಆ ಸಭೆಯ ಕೊನೆಯಲ್ಲಿ ಮನವಿ ಮಾಡಿದ್ದೆ. ಜನರು ಈಗಾಗಲೇ ಸುಮಾರು 20 ಲಕ್ಷ ರೂ. ನೀಡಿದ್ದಾರೆ.
ನಾಳೆ ಬಿಜೆಪಿ ವತಿಯಿಂದ ಭರತ್ ಭೂಷಣ್ ಅವರ ಮನೆಗೆ 10 ಲಕ್ಷದ ಒಂದು ರೂ. ಮತ್ತು ಮಂಜುನಾಥ್ ಅವರ ಮನೆಗೆ ಒಂದೆರಡು ದಿನದಲ್ಲಿ 10 ಲಕ್ಷದ ಒಂದು ರೂ. ಯನ್ನು ಕೊಡಲಿದ್ದೇವೆ ಎಂದು ಪ್ರಕಟಿಸಿದರು.
ಶಿಕ್ಷಣ- ಆರೋಗ್ಯದ ಜವಾಬ್ದಾರಿ
ಆರ್.ವಿ. ವಿಶ್ವವಿದ್ಯಾಲಯವು ನನ್ನ ಮನವಿಗೆ ಸ್ಪಂದಿಸಿ ಪಲ್ಲವಿ ಮಂಜುನಾಥ್ ಅವರಿಗೆ ಪತ್ರ ಬರೆದಿದೆ. ಅವರ ಮಗ ಅಭಿಜಯನಿಗೆ ಬಿ,ಕಾಂ, ಸ್ನಾತಕೋತ್ತರ ಪದವಿ ಪಡೆಯಲು ಈ ಶಿಕ್ಷಣ ಸಂಸ್ಥೆಯು ಅವನ ಸಂಪೂರ್ಣ ಶಿಕ್ಷಣ ವೆಚ್ಚವನ್ನು ಭರಿಸಲಿದೆ ಎಂದು ತಿಳಿಸಿದ್ದಾರೆ. ಇದನ್ನು ಅವನ ತಾಯಿಗೆ ತಲುಪಿಸುತ್ತೇನೆ ಎಂದು ತೇಜಸ್ವಿ ಸೂರ್ಯ ತಿಳಿಸಿದರು.
ಭರತ್ ಭೂಷಣ್ ಅವರ 3 ವರ್ಷದ ಮಗುವಿಗೆ ಕನಕಪುರ ರಸ್ತೆಯ ಟ್ರಾನ್ಸೆಂಡ್ ಎಂಬ ಶಿಕ್ಷಣ ಸಂಸ್ಥೆಯು ಒಂದನೇ ತರಗತಿಯಿಂದ 12ನೇ ತರಗತಿವರೆಗೆ ಸಿಬಿಎಸ್‍ಇ ಶಿಕ್ಷಣದಡಿ ವಿದ್ಯಾಭ್ಯಾಸ ಕೊಡುವ ಜವಾಬ್ದಾರಿಯನ್ನು ಹೊರಲು ಮುಂದಾಗಿದೆ. ಈ ಕುರಿತು ಸುಜಾತಾ ಭರತ್ ಭೂಷಣ್ ಅವರಿಗೆ ಪತ್ರ ಬರೆದಿದೆ. ಮುಂದಿನ 11 ವರ್ಷಗಳವರೆಗೆ ಈ ಎರಡೂ ಕುಟುಂಬಗಳ ತಾಯಿ ಮತ್ತು ಮಕ್ಕಳ ಆರೋಗ್ಯವನ್ನು ಸಂಪೂರ್ಣವಾಗಿ ಬೆಂಗಳೂರಿನ ಮಹಾವೀರ ಜೈನ್ ಆಸ್ಪತ್ರೆಯವರು ನೋಡಿಕೊಳ್ಳುತ್ತಾರೆ. ಅವರೂ ಈ ಕುರಿತು ಪತ್ರ ಬರೆದಿದ್ದಾರೆ ಎಂದು ವಿವರಿಸಿದರು. ಈ ಮೂರೂ ಸಂಸ್ಥೆಗಳಿಗೆ ಅಭಿನಂದನೆ- ಕೃತಜ್ಞತೆ ಸಲ್ಲಿಸಿದರು.