ಬೆಂಗಳೂರು : ಬೆಟ್ಟಿಂಗ್ ಚಟಕ್ಕೆ ಬಿದ್ದು ಕಳ್ಳತನ ಮಾಡ್ತಿದ್ದ ಸಾಫ್ಟ್‌ವೇರ್ ಎಂಜಿನಿಯರನ್ನು ಮಾಗಡಿ ರೋಡ್ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಮೂಲದ ಕೆ.ಎ.ಮೂರ್ತಿ (27) ಬಂಧಿತ ಸಾಫ್ಟ್‌ವೇರ್ ಎಂಜಿನಿಯರ್. ಬೆಂಗಳೂರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡ್ತಿದ್ದ ಮೂರ್ತಿ ವಿಪರೀತ ಬೆಟ್ಟಿಂಗ್ ಚಟಕ್ಕೆ ಬಿದ್ದು ಸಾಲಗಾರನಾಗಿದ್ದ.
ತಂದೆ ಅಣ್ಣಪ್ಪ ಅವರು ಮಗನ ಸಾಲ ತೀರಿಸಲು ಶಿವಮೊಗ್ಗದಲ್ಲಿದ್ದ ಆಸ್ತಿಯನ್ನು ಮಾರಿದ್ದರು. ಬಳಿಕ ಕೆಲಸಕ್ಕೆ ಹೋಗಿ ಜೀವನ ಸಾಗಿಸೋಣ ಎಂದು ಕುಟುಂಬ ಸಮೇತರಾಗಿ ಬೆಂಗಳೂರಿಗೆ ಬಂದಿದ್ದರು.
ಬೆಂಗಳೂರಿಗೆ ಬಂದರೂ ಬೆಟ್ಟಿಂಗನ್ನು ಬಿಡದ ಮೂರ್ತಿ, ಬೆಟ್ಟಿಂಗ್ ಹಣಕ್ಕಾಗಿ ಮನೆಗಳ್ಳತನ ಮಾಡ್ತಿದ್ದ. ಅಲ್ಲದೇ ಅಂಗಾಳ ಪರಮೇಶ್ವರಿ ದೇವಸ್ಥಾನಕ್ಕೆ ಬಂದಿದ್ದ ಮಹಿಳೆಯ ಸರ ಕಿತ್ತಿದ್ದ. ಈ ಪ್ರಕರಣ ಸಂಬಂಧ ಆರೋಪಿ ಮೂರ್ತಿಯನ್ನು ಮಾಗಡಿ ರೋಡ್ ಪೊಲೀಸರು ಬಂಧಿಸಿದ್ದರು.
ಆರೋಪಿಯ ವಿಚಾರಣೆ ವೇಳೆ ಹಲವು ಮನೆಗಳ್ಳತನ ಪ್ರಕರಣ ಪತ್ತೆಯಾಗಿದ್ದು, ಕೋಣನಕುಂಟೆ, ಸದ್ದುಗುಂಟರಪಾಳ್ಯ, ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಬಂಧಿತನಿಂದ 17 ಲಕ್ಷ ರೂ. ಮೌಲ್ಯದ 245 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.