ಚಿತ್ರದುರ್ಗ: ಯುಗಾದಿ ಹಬ್ಬಕ್ಕೆ ಬೇಕಾಗಿರುವ ವಸ್ತುಗಳನ್ನು ಮಾರಾಟ ಮಾಡಲು ಹಾಗೂ ಸಾರ್ವಜನಿಕರು ಖರೀದಿಸಲು ಅನುಕೂಲವಾಗುವಂತೆ ಮಾ. 28 ರಿಂದ 31 ರವರೆಗೆ ಚಿತ್ರದುರ್ಗ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ತಾತ್ಕಾಲಿಕ ಮಾರುಕಟ್ಟೆ ವ್ಯವಸ್ಥೆಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ತಿಳಿಸಿದ್ದಾರೆ.
ಯುಗಾದಿ ಹಬ್ಬದ ಪ್ರಯುಕ್ತ ಹಬ್ಬಕ್ಕೆ ಬೇಕಾಗಿರುವ ವಸ್ತುಗಳನ್ನು ವ್ಯಾಪಾರಸ್ತರು ಚಿತ್ರದುರ್ಗ ನಗರದ ಎಂ.ಜಿ. ವೃತ್ತಕ್ಕೆ ಬಂದು ವ್ಯಾಪಾರವನ್ನು ಈ ಹಿಂದಿನಿಂದಲೂ ಮಾಡುತ್ತಾ ಬರುತ್ತಿದ್ದಾರೆ. ಇದರಿಂದಾಗಿ ಎಂ.ಜಿ. ವೃತ್ತ, ಆನೆ ಬಾಗಿಲು ರಸ್ತೆ, ಮೆದೆಹಳ್ಳಿ ರಸ್ತೆ, ಹೊಳಲ್ಕೆರೆ ರಸ್ತೆ ಹಾಗೂ ಬಿ.ಡಿ. ರಸ್ತೆಗಳನ್ನು ಹೆಚ್ಚಿನ ಸಾರ್ವಜನಿಕರು ಸೇರುವುದರಿಂದ ನಗರದಲ್ಲಿ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ. ಅಲ್ಲದೆ ಹೆಚ್ಚಿನ ಜನದಟ್ಟಣೆಯಾಗುವ ಹಿನ್ನೆಲೆಯಲ್ಲಿ ಸರಗಳ್ಳತನಗಳು, ಮೊಬೈಲ್ ಮತ್ತು ಪರ್ಸ್ ಕಳ್ಳತನಗಳು ನಡೆಯುವ ಸಾಧ್ಯತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಹಬ್ಬದ ನಿಮಿತ್ತ ಹಬ್ಬಕ್ಕೆ ಬೇಕಾಗುವ ವಸ್ತುಗಳ ಮಾರಾಟಗಾರರಿಗೆ ನಗರದ ಹಳೇ ಮಾಧ್ಯಮಿಕ ಶಾಲಾ ಮೈದಾನದಲ್ಲಿ ತಾತ್ಕಾಲಿಕ ಮಾರುಕಟ್ಟೆ ವ್ಯವಸ್ಥೆಗೊಳಿಸುವಂತೆ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿಗಳು ಕೋರಿಕೆ ಸಲ್ಲಿಸಿರುತ್ತಾರೆ.
ಅದರಂತೆ ಸಾರ್ವಜನಿಕರ ಸುಗಮ ಸಂಚಾರ ಹಾಗೂ ಜನದಟ್ಟಣೆ ತಡೆಯುವ ಸಲುವಾಗಿ ಮಾ. 28 ರಿಂದ ಮಾರ್ಚ್ 31 ರವರೆಗೆ ಯುಗಾದಿ ಹಬ್ಬದ ಪ್ರಯುಕ್ತ ಹಬ್ಬಕ್ಕೆ ಬೇಕಾಗುವ ವಸ್ತುಗಳ ಮಾರಾಟಗಾರರಿಗೆ ನಗರದ ಹಳೇ ಮಾಧ್ಯಮಿಕ ಶಾಲಾ ಮೈದಾನದಲ್ಲಿ ನಗರಸಭೆಯ ವತಿಯಿಂದ ತಾತ್ಕಾಲಿಕ ಮಾರುಕಟ್ಟೆಯ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಸಾರ್ವಜನಿಕರು ಹಾಗೂ ಮಾರಾಟಗಾರರು ಹಬ್ಬದ ವಸ್ತುಗಳಿಗೆ ಸಂಬಂಧಿಸಿದಂತೆ ಇದೇ ಮೈದಾನದಲ್ಲಿ ತಮ್ಮ ವ್ಯಾಪಾರ ವಹಿವಾಟು ನಿರ್ವಹಿಸುವಂತೆ ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಅವರು ತಿಳಿಸಿದ್ದಾರೆ.