ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸುತ್ತಿರುವ ಪ್ರವಾಸಿಗರು ಮತ್ತು ಸ್ಥಳೀಯ ಜನತೆಯ ಹಿತದೃಷ್ಟಿಯಿಂದ ಗಿರಿಪ್ರದೇಶದ ಕೆಲವು ಪ್ರವಾಸೋದ್ಯಮ ಸ್ಥಳಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪ್ರವಾಸೋದ್ಯಮ ನೀತಿ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗಿರಿಪ್ರದೇಶದ ಕೆಲವು ಭಾಗಗಳಲ್ಲಿ ಗುಡ್ಡ ಕುಸಿತದಿಂದ ಅಲ್ಲಲ್ಲಿ ಮಣ್ಣು ಆವರಿಸಿದ್ದು, ರಸ್ತೆ ಕುಸಿತ ಸಂಭವಿಸಿರುವ ಹಿನ್ನೆಲೆಯಲ್ಲಿ ನಿರ್ಬಂಧ ವಿಧಿಸಲಾಗಿದೆ. ನಿಯಮಾನುಸಾರ ಪ್ರವಾಸಿಗರು ತಮ ಸುರಕ್ಷತೆ ದೃಷ್ಟಿಯಿಂದ ಜಿಲ್ಲಾಡಳಿತದ ನಿಯಮಗಳನ್ನು ಪಾಲಿಸುವುದು ಅಗತ್ಯವಾಗಿದೆ ಎಂದರು.
ಪ್ರವಾಸಿಗರು ಬರುವ ವಾಹನಗಳಿಗೆ ಸ್ಥಳೀಯವಾಗಿ ಗುರುತಿಸಿರುವ ಸ್ಥಳಗಳಲ್ಲಿ ತಮ ವಾಹನಗಳನ್ನು ನಿಲುಗಡೆಗೊಳಿಸಿ ಸ್ಥಳೀಯ ಲಘು ವಾಹನಗಳಲ್ಲಿ ಪ್ರವಾಸಿ ಸ್ಥಳಗಳ ವೀಕ್ಷಣೆಗೆ ತೆರಳಬಹುದು. ಪ್ರವಾಸಿಗರನ್ನು ಕರೆದೊಯ್ಯಲು ಬೆಳಿಗ್ಗೆ 100 ಹಾಗೂ ಸಂಜೆ 100 ವಾಹನಗಳನ್ನು ಮಾತ್ರ ಬಿಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.