ಹೈದರಾಬಾದ್: ತೆಲಂಗಾಣ ಸರ್ಕಾರಿ ಬಸ್ ಮತ್ತು ಖಾಸಗಿ ಟಿಪ್ಪರ್ ನಡುವೆ ಅಪಘಾತ ಸಂಭವಿಸಿದ್ದು, ಇಂದು ಬೆಳಗ್ಗೆ ಘಟನೆ ನಡೆದಿದೆ. ಮೃತಪಟ್ಟವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಘಟನೆಯ ವಿಡಿಯೋ ಹಾಗೂ ಫೋಟೋಗಳು ಹರಿದಾಡುತ್ತಿದ್ದು, ಚಿತ್ರಗಳೇ ಅಪಘಾತದ ತೀವ್ರತೆಯನ್ನು ಹೇಳುತ್ತಿವೆ. ಜಲ್ಲಿಕಲ್ಲು ತುಂಬಿಕೊಂಡು ಹೈದರಾಬಾದ್ ಕಡೆಯಿಂದ ಬಿಜಾಪುರ ಕಡೆಗೆ ಹೋಗುತ್ತಿದ್ದ ಲಾರಿಯೊಂದು ತಾಂಡೂರ್‌ನಿಂದ ಹೈದರಾಬಾದ್ ಕಡೆಗೆ ತೆರಳುತ್ತಿದ್ದ ತೆಲಂಗಾಣ ಸಾರಿಗೆ ಸಂಸ್ಥೆಯ ಬಸ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ 24 ಮಂದಿ ಸಾವನ್ನಪ್ಪಿದ್ದಾರೆ.
ತೆಲಂಗಾಣದ ಮಿರ್ಜಗೂಡ ಬಳಿ ಹೈದರಾಬಾದ್-ಬಿಜಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಸರ್ಕಾರಿ ಬಸ್ ಮತ್ತು ಟಿಪ್ಪರ್ ಲಾರಿ ಎರಡೂ ನಜ್ಜುಗುಜ್ಜಾಗಿದೆ. ಹೀಗಾಗಿ ಬಸ್ ಚಾಲಕ ಮತ್ತು ಟಿಪ್ಪರ್ ಚಾಲಕ ಇಬ್ಬರೂ ಅಸುನೀಗಿದ್ದಾರೆ. ಈ ದೃಶ್ಯಗಳೇ ಅಪಘಾತದ ತೀವ್ರತೆಯನ್ನ ಹೇಳುತ್ತಿವೆ.
ಬಸ್ ಮೇಲೆ ಜಲ್ಲಿಕಲ್ಲುಗಳು ಬಿದ್ದಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಏಕಾಏಕಿ ಬಸ್‌ನಲ್ಲಿದ್ದ ಪ್ರಯಾಣಿಕರ ಮೇಲೆ ಬಿದ್ದ ಜಲ್ಲಿಕಲ್ಲುಗಳು ಮಧ್ಯೆ ಸಿಲುಕಿಯೇ ಸುಮಾರು 10ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಮೂರು ಜೆಸಿಬಿಗಳ ಸಹಾಯದಿಂದ ಜಲ್ಲಿಕಲ್ಲುಗಳ ರಾಶಿಯ ಅಡಿಯಲ್ಲಿ ಸಿಲುಕಿರುವ ಪ್ರಯಾಣಿಕರನ್ನ ಹೊರತೆಗೆಯಲಾಯಿತು. ಒಟ್ಟು ಮೃತರಲ್ಲಿ 10 ಮಂದಿ ಪುರುಷರು, 9 ಮಹಿಳೆಯರೂ ಕೂಡ ಸೇರಿದ್ದಾರೆ. ಅಪಘಾತ ನಡೆಯುವಾಗ ಬಸ್‌ನಲ್ಲಿ ಸುಮಾರು 70 ಪ್ರಯಾಣಿಕರಿದ್ದರು ಎಂದು ವರದಿಗಳು ತಿಳಿಸಿವೆ.

































