ನವದೆಹಲಿ : ಬಂಧನಕ್ಕೆ ಒಳಗಾದ ಉಗ್ರರು ಸುಮಾರು 32 ಹಳೆಯ ವಾಹನಗಳನ್ನು ಬಳಸಿ ದೇಶದ 4 ನಗರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಏಕಕಾಲದಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದರು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಬಂಧಿತರನ್ನು ತನಿಖಾಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು ದೆಹಲಿಯ ಹಲವು ಕಡೆ, ಅಯೋಧ್ಯೆ, ವಾರಾಣಸಿ ದೇವಸ್ಥಾನ ಸೇರಿದಂತೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ದೇಶದ ಹಲವು ಜಾಗಗಳಲ್ಲಿ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದರು.
ಐ20 ಕಾರು ಸ್ಫೋಟದಲ್ಲಿ ಕೆಣಪು ಕೋಟೆ ಬಳಿ ಸ್ಫೋಟವಾದರೆ, ಇಕೋ ಸ್ಫೋರ್ಟ್ ಕಾರು ಹರ್ಯಾಣದಲ್ಲಿ ಬುಧವಾರ ಪತ್ತೆಯಾಗಿದೆ. ಇದೀಗ ಈ ತಂಡಕ್ಕೆ ಸೇರಿದ ಬ್ರೀಜಾ ಕಾರಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ವೈದ್ಯೆ ಶಾಹೀನ್ ಶಾಹಿದ್ ಹೆಸರಿನಲ್ಲಿ ಬ್ರಿಜಾ ಕಾರ್ ನೋಂದಣಿಯಾಗಿದೆ ಎಂದು ತಿಳಿದುಬಂದಿದೆ.
32 ಕಾರುಗಳನ್ನು ಖರೀದಿಸಿದ ಬಳಿಕ ಅದರಲ್ಲಿ ಬಾಂಬ್ ಇಡಲು ಮಾರ್ಪಾಡು ಮಾಡಲು ಸಹ ಸಂಚು ರೂಪಿಸಲಾಗಿತ್ತು. ಕೃತ್ಯ ಎಸಗಬೇಕಾದರೆ ಈ ಗುಂಪಿನಲ್ಲಿ ಮತ್ತಷ್ಟು ಸಂಖ್ಯೆ ಸದಸ್ಯರು ಇದ್ದಾರೆ ಎಂದು ಶಂಕಿಸಲಾಗಿದೆ. ಹೀಗಾಗಿ ಉಳಿದ ತಂಡದ ಸದಸ್ಯರಿಗಾಗಿ ತನಿಖಾ ಸಂಸ್ಥೆಗಳು ಶೋಧ ಕಾರ್ಯ ನಡೆಸುತ್ತಿವೆ.
ಆರೋಪಿಗಳು ಜಂಟಿಯಾಗಿ ಸುಮಾರು 20 ಲಕ್ಷ ರೂ. ಹಣವನ್ನು ಸಂಗ್ರಹಿಸಿದ್ದರು. ಕಾರ್ಯಾಚರಣೆಯ ವೆಚ್ಚಗಳಿಗಾಗಿ ಉಮರ್ಗೆ ಈ ಹಣವನ್ನು ನೀಡಲಾಗಿತ್ತು. 32 ಕಾರುಗಳನ್ನು ಖರೀದಿ ಮಾಡಬೇಕಾದರೆ ಕೋಟ್ಯಂತರ ರೂ. ಹಣದ ಅಗತ್ಯವಿದೆ. ಇಷ್ಟೊಂದು ಹಣವನ್ನು ಇವರು ಎಲ್ಲಿಂದ ತರಲು ಮುಂದಾಗಿದ್ದರು? ಇವರ ಆರ್ಥಿಕ ಮೂಲ ಯಾವುದು? ಈ ವಿಚಾರಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ.































