ನವದೆಹಲಿ : ಐತಿಹಾಸಿಕ ಕೆಂಪು ಕೋಟೆ ಆವರಣದಲ್ಲಿ ನಡೆದ ಜೈನರ ಧಾರ್ಮಿಕ ಕಾರ್ಯಕ್ರಮದಲ್ಲಿ ಎರಡು ಚಿನ್ನದ ಕಲಶವನ್ನು ಕಳುವು ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹಾಪುರ್ ನಿವಾಸಿ ಭೂಷಣ್ ವರ್ಮಾ ಬಂಧಿತ ಆರೋಪಿ.
ಆರೋಪಿಯು ಜೈನ್ ಧರ್ಮದ ಧಾರ್ಮಿಕ ಕಾರ್ಯಕ್ರಮದಲ್ಲಿ 1.5 ಕೋಟಿ ಮೌಲ್ಯದ ವಜ್ರ, ರತ್ನ ಖಚಿತ ಕಲಶವನ್ನು ಕಳ್ಳತನ ಮಾಡಿದ್ದ. ಜೈನ ಅರ್ಚಕನ ವೇಷದಲ್ಲಿ ಬಂದ ಆರೋಪಿ ಬೆಲೆಬಾಳುವ ವಸ್ತುಗಳನ್ನ ಕಳುವು ಮಾಡಿದ್ದ. ಕಳ್ಳತನದ ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದೀಗ ಉತ್ತರ ಪ್ರದೇಶದ ಅಪರಾಧ ವಿಭಾಗದ ಪೊಲೀಸರು ಆರೋಪಿಯನ್ನು ಬಂಧಿಸಿ, ಬಿಎನ್‌ಎಸ್ ಸೆಕ್ಷನ್ 303 (2)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೆಂಪುಕೋಟೆ ಆವರಣದಲ್ಲಿರುವ ಪಾರ್ಕ್ನಲ್ಲಿ ‘ದಶಲಕ್ಷಣ ಮಹಾಪರ್ವ’ ಹೆಸರಿನಲ್ಲಿ ಆ.15ರಿಂದ ಸೆ.9ರ ವರೆಗೆ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಜೈನ ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿಶೇಷ ಅತಿಥಿಯಾಗಿದ್ದರು. ಈ ಸಂದರ್ಭ ಕಳ್ಳತನ ನಡೆದಿದೆ. ಜೈನ ಅರ್ಚಕನ ವೇಷದಲ್ಲಿ ಬಂದ ಆರೋಪಿ ಬೆಲೆ ಬಾಳುವ ವಸ್ತುಗಳನ್ನು ಒಂದು ಚೀಲದಲ್ಲಿ ತುಂಬಿಕೊಂಡು ಹೋಗಿದ್ದ. ಆಯೋಜಕರು ಗಣ್ಯರನ್ನು ಸ್ವಾಗತಿಸುವ ಸಂದರ್ಭದಲ್ಲಿ ಆರೋಪಿ ವಸ್ತುಗಳನ್ನ ಕಳುವು ಮಾಡಿದ್ದ.