ನವದೆಹಲಿ: ಮಹಾರಾಷ್ಟ್ರ ಸೇರಿದಂತೆ ಪ್ರಮುಖ ಈರುಳ್ಳಿ ಉತ್ಪಾದಿಸುವ ಪ್ರದೇಶಗಳಲ್ಲಿ ಲೋಕಸಭೆ ಚುನಾವಣೆಗೆ ಮೊದಲು ಕೈಗೊಂಡ ಈ ನಿರ್ಧಾರ ರಾಜಕೀಯವಾಗಿ ಪರಿಣಾಮ ಬೀರುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಈರುಳ್ಳಿ ಕನಿಷ್ಠ ರಫ್ತು ಬೆಲೆಯನ್ನು ಕ್ವಿಂಟಾಲ್ ಗೆ 550 ಡಾಲರ್(ಕೆಜಿಗೆ 46) ರೂ. ನಿಗದಿಪಡಿಸಿದೆ. ಶೇಕಡ 40ರಷ್ಟು ರಫ್ತು ಸುಂಕ ನಿಗದಿಪಡಿಸಿದೆ.
ಕಳೆದ ವರ್ಷದ ಡಿಸೆಂಬರ್ 8ರಂದು ಈರುಳ್ಳಿ ರಫ್ತಿಗೆ ಕಡಿವಾಣ ಹಾಕಲಾಗಿತ್ತು. ಮಾರ್ಚ್ 31ರವರೆಗೆ ಇದು ಜಾರಿಯಲ್ಲಿತ್ತು, ಆನಂತರ ಮತ್ತೆ ನಿಷೇಧ ಆದೇಶ ಹೊರಡಿಸಲಾಗಿದ್ದು, ಶನಿವಾರ ಸರ್ಕಾರ ಅದನ್ನು ತೆರವುಗೊಳಿಸಿದೆ. ನಮ್ಮ ರಫ್ತು ನೀತಿ ಬದಲಿಸಿದ್ದು, ಈರುಳ್ಳಿ ರಫ್ತು ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ ಅಧಿಸೂಚನೆ ಹೊರಡಿಸಿದೆ.
ಮಹಾರಾಷ್ಟ್ರ ರೈತರು ಈರುಳ್ಳಿ ರಫ್ತು ನಿಷೇಧಿಸಿದ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದ್ದರು. ಕಾಂಗ್ರೆಸ್ ಕೂಡ ಪ್ರತಿಭಟನೆಗೆ ಬೆಂಬಲ ನೀಡಿ ಕೇಂದ್ರದ ವಿರುದ್ಧ ಗದಾಪ್ರಹಾರ ನಡೆಸಿತ್ತು. ಈರುಳ್ಳಿ ರಫ್ತಿನಿಂದ ಲಾಭ ಹೆಚ್ಚಾಗುತ್ತದೆ. ದೇಶಿಯವಾಗಿಯೂ ಬೆಲೆ ಏರಿಕೆಯಾಗುತ್ತದೆ ಎಂಬುದು ಈರುಳಿ ಬೆಳೆಗಾರರ ಲೆಕ್ಕಾಚಾರವಾಗಿದೆ.
ಕೇಂದ್ರ ಸರ್ಕಾರ ಈರುಳ್ಳಿ ಮೇಲಿನ ರಫ್ತು ಮೇಲಿದ್ದ ನಿಷೇಧ ಹಿಂಪಡೆದ ಬೆನ್ನಲ್ಲೇ ಈರುಳ್ಳಿ ದರ ಏರಿಕೆ ಕಂಡಿದೆ. ಮಹಾರಾಷ್ಟ್ರ ಮಾರುಕಟ್ಟೆಯಲ್ಲಿ ಈರುಳ್ಳಿ ದರದಲ್ಲಿ ಏರಿಕೆ ಕಂಡು ಬಂದಿದೆ. ಭಾರತದ ಅತಿ ದೊಡ್ಡ ಸಗಟು ಈರುಳ್ಳಿ ಮಾರುಕಟ್ಟೆಯಾಗಿರುವ ನಾಸಿಕ್ ಜಿಲ್ಲೆಯ ಲಾಸಲ್ ಗಾಂವ್ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಈರುಳ್ಳಿ ದರ ಸರಾಸರಿ 200 ರೂಪಾಯಿ ಏರಿಕೆಯಾಗಿದೆ. ಗುಣಮಟ್ಟದ ಆಧಾರದ ಮೇಲೆ ಕ್ವಿಂಟಲ್ ಈರುಳ್ಳಿ ದರ 800 ರೂ., 2551 ರೂ., 2100 ರೂ.ಗೆ ಮಾರಾಟವಾಗುತ್ತಿದೆ.
ಈರುಳ್ಳಿ ರಫ್ತು ಮೇಲೆ ಶೇ. 40ರಷ್ಟು ಸುಂಕ ವಿಧಿಸುವುದರಿಂದ ಲಾಭ ಕುಸಿಯುತ್ತದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರೈತರ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಶನಿವಾರ ಈರುಳ್ಳಿ ರಫ್ತು ಮೇಲಿನ ನಿಷೇಧವನ್ನು ಸಂಪೂರ್ಣ ತೆಗೆದು ಹಾಕಿದೆ.